Archive for ಏಪ್ರಿಲ್ 25, 2014


ಈ ಬಾರಿ ಸಂಚಾರಿ ಥಿಯೇಟರ್ ಮಕ್ಕಳ ಬೇಸಿಗೆ ರಂಗಶಿಬಿರದಲ್ಲಿ ಎಚ್.ದುಂಡಿರಾಜ್ ರಚಿಸಿರುವ “ಅಜ್ಜಿಕಥೆ” ನಾಟಕವನ್ನುಕೈಗೆತ್ತಿಕೊಂಡಿದೆ. ಈ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ದೇಶದಾದ್ಯಂತ ಕುಸಿಯುತ್ತಿರುವ ಹೆಣ್ಣುಸಂತಾನದ ಹಿನ್ನಲೆಯಲ್ಲಿ, 21 ನೇ ಶತಮಾನದಲ್ಲಿದ್ದರೂ ಇನ್ನೂ ಹಲವು ಕಡೆ ಕಂಡುಬರುತ್ತಿರುವ ಲಿಂಗತಾರತಮ್ಯದ ಸಮಸ್ಯೆಯ ಹಿನ್ನಲೆಯಲ್ಲಿ ಈ ನಾಟಕ ಹೆಚ್ಚು ಪ್ರಸ್ತುತ. ಮಲ್ಟಿಮೀಡಿಯಾಗಳ ಭರಾಟೆಯ ಮದ್ಯೆ ಮನೆಯೊಳಗಿನ ಅಜ್ಜಿ ಹೇಳುವ ಕಥೆ ನಿಧಾನವಾಗಿ ಹಿಂದೆ ಸರಿಯುತ್ತಿದೆ. ಆದರೂ ಅಜ್ಜಿ ಹೇಳುವ ಕಥೆ ಹೆಚ್ಚು ಆಪ್ಯಾಯಮಾನ. ಈ ನಾಟಕದೊಳಗೂ
ಒಬ್ಬಳು ಅಜ್ಜಿ ಬಂದು ಮಕ್ಕಳಿಗೆ ಕಥೆ ಹೇಳುತ್ತಾಳೆ. ಹೆಣ್ಣು ಮಗು ಕೂಡ ಹೇಗೆ ಶಕ್ತಳು ಎಂಬ ಕಥೆ ಹೇಳುತ್ತಾಳೆ.ಈ ನಾಟಕವನ್ನು ಶಿಬಿರದ ನಿರ್ದೇಶಕ ಗಣಪ ನಿರ್ದೇಶಿಸುತ್ತಿದ್ದಾರೆ. ಶಿವಕುಮಾರ್ ಸುಣಗಾರ್ ಮತ್ತು ಕಿರಣ್.ಟಿ.ಸಿ ರಂಗಸಜ್ಜಿಕೆ ಮತ್ತು ರಂಗಪರಿಕರದ ವಿನ್ಯಾಸ ಮಾಡುತ್ತಿದ್ದಾರೆ. ವಿನಯ ಚಂದ್ರ ಅವರು ಬೆಳಕಿನ ವಿನ್ಯಾಸ ಮಾಡುತ್ತಿದ್ದಾರೆ.ಗಜಾನನ.ಟಿ.ನಾಯ್ಕ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.ನಾಟಕದ ತಾಲೀಮು ಪ್ರಾರಂಭವಾಗಿದೆ.

ಹೊನ್ನಾವರದ ಗಣಪತಿ ಗೌಡ ತನ್ನ ಕಾಲೇಜು ದಿನಗಳಿಂದಲೂ ರಂಗಭೂಮಿಯ ಬಗ್ಗೆ ಒಲವು ಹೊಂದಿದ್ದವರು.ಅದರ ಬಗ್ಗೆ ಹೆಚ್ಚಿನ ಅನುಭವಕ್ಕಾಗಿ ನೀನಾಸಂ ಸಂಸ್ಥೆಯೆಡೆಗೆ ನಡೆದರಾದರೂ ತಲುಪಿದ್ದು ಸಾಣೇಹಳ್ಳಿ.ಸಾಣೇಹಳ್ಳಿಯ ಶಿವಸಂಚಾರದ ರೆಪರ್ಟರಿಯಲ್ಲಿ ನಟರಾಗಿ ಕೆಲಸ ಮಾಡಿದರು. ನಂತರ ಮರಳಿ ನೀನಾಸಂ ಗೆ ಡಿಪ್ಲಮೋ ಮಾಡಲು ಸೇರಿಕೊಂಡರು. ಒಂದು ವರುಷದ ಕೋರ್ಸ ಮುಗಿಸಿ 2003-04 ರಲ್ಲಿ ನೀನಾಸಂ ತಿರುಗಾಟದಲ್ಲಿ ಕರ್ನಾಟಕದ ಉದ್ದಗಲ ಪರ್ಯಟನ ಮಾಡಿದರು. ಆಮೇಲೆ ರಂಗಾಯಣದಲ್ಲಿ ಪ್ರಾರಂಭವಾದ ಕಿಶೋರ ಕೇಂದ್ರಕ್ಕೆ ಸೇರಿಕೊಂಡರು.ಅಲ್ಲಿ ಮಕ್ಕಳ ರಂಗಭೂಮಿಗೆ ಕುರಿತಂತೆ ಅಭ್ಯಾಸ ಮಾಡಿದರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿರ್ದೇಶಕರೊಂದಿಗೆ ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಂಡರು. 2008 ಕ್ಕೆ ಬೆಂಗಳೂರಿಗೆ ಬಂದವರೇ ಸೀರಿಯಲ್ ಮತ್ತು ಸಿನಮಾಗಳಲ್ಲೂ ಕೆಲಸ ಮಾಡಿದರಾದರೂ ರಂಗಭೂಮಿಗೇ ಅಂಟಿಕೊಂಡರು. ಸಂಚಾರಿಯ ಅಂಗಳಕ್ಕೆ ಬಂದವರು ಸಂಚಾರಿಯ ಭಾಗವಾಗಿಬಿಟ್ಟರು.

ಸಂಚಾರಿಯಲ್ಲಿ ಅರಹಂತ, ನೋ ಪ್ರೆಸೆಂಟ್ಸ ಪ್ಲೀಸ್, ಕೈಲಾಸಂ ಕೀಚಕ ನಾಟಕಗಳಲ್ಲಿ  ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದರು. ಜೊತೆಜೊತೆಗೆ ಅನೇಕ, ಥಿಯೇಟರ್ ತತ್ಕಾಲ್ ರಂಗತಂಡಗಳ ಅಗ್ನಿಲೋಕ ಮತ್ತು ಶೇಕ್ಸಪಿಯರ್
ಮನೆಗೆ ಬಂದ ನಾಟಕಗಳಲ್ಲಿ ಅಭಿನಯಿಸಿದರು. ಅಲ್ಲದೆ ಮೈಸೂರು, ಧಾರವಾಡ, ಗುಲ್ಬರ್ಗ, ಹೊನ್ನಾವರ, ಬೆಳಗಾಂ, ಶಿರಸಿ ಮುಂತಾದ ಕಡೆಗಳಲ್ಲಿ ನಾಟಕ ನಿರ್ದೇಶನ ಮಾಡಿದ್ದಾರೆ.  ರಂಗಶಿಬಿರಗಳನ್ನು ನಡೆಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದ  ನಾಟಕ  ವಿಭಾಗದಲ್ಲಿ ಎಂ.ಎ  ಮಾಡಿ  ಮೂರು  ಚಿನ್ನದ  ಪದಕಗಳನ್ನು ಪಡೆದು ಕೊಂಡಿದ್ದಾರೆ. ಈ ಬಾರಿ ಸಂಚಾರಿ ಥಿಯೇಟರ್ ಮಕ್ಕಳ ಶಿಬಿರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.