Category: ವ್ಯಾನಿಟಿ ಬ್ಯಾಗ್


This slideshow requires JavaScript.

WP_20150127_002

This slideshow requires JavaScript.

Vijaya karanataka

v bag

ಘಮಘಮಿಸುವ ಬೆಳ್ಳನೆಯ ಮಲ್ಲಿಗೆಯ ನೇಯ್ಗೆ. ನಡುನಡುವೆ ಚೆಂದ ಕಾಣುವುದಕ್ಕಾಗಿ ಕನಕಾಂಬರ ಹೂಗಳು. ಮಧ್ಯದಲ್ಲೊಂದು ಹಸಿರೆಲೆಯ ಶೃಂಗಾರ. ಇಂತಹ ಮಲ್ಲಿಗೆಯ ಮಾಲೆಯ ಹಾಗೆ ನೇಯ್ದಿರುವ ನಾಟಕ ವೈದೇಹಿಯವರ 18 ಕವನಗಳು ಹಾಗೂ ಒಂದು ಲೇಖನವನ್ನು ಆಧರಿಸಿರುವ ವ್ಯಾನಿಟಿ ಬ್ಯಾಗ್.

‘ನೋಡಬಾರದು ಚೀಲದೊಳಗನು’ ಎಂಬ ಶೀರ್ಷಿಕೆಯ ವೈದೇಹಿಯವರ ಕವನವನ್ನು ಓದದವರು, ಕೇಳದವರೇ ಕಡಿಮೆ. ಈ ಕವನವೇ ಮಲ್ಲಿಗೆಯ ಮಾಲೆಯ ಮಲ್ಲಿಗೆಯಂತೆ ಇಡಿಯ ನಾಟಕಕ್ಕೆ ಆಧಾರಸ್ತಂಭ. ‘ವ್ಯಾನಿಟಿ ಬ್ಯಾಗಿನಲ್ಲಿ ಕೈ ಹಾಕಿ ನೋಡುವುದು/ ಎಂದಿಗೂ ಉಚಿತವಲ್ಲ ಪುರುಷರೇ’ ಎಂಬ ಈ ಕವನದ ಮೊದಲ ಸಾಲೇ ನಾಟಕಕ್ಕೆ ಶೀರ್ಷಿಕೆಯಾಗಿದೆ. 52 ಸಾಲುಗಳ ಈ ಕವನದಲ್ಲಿ ವ್ಯಾನಿಟಿ ಬ್ಯಾಗಿನಲ್ಲಿ ಏನೇನು ಇರಬಹುದು ಎಂಬುದನ್ನು ಬಿಚ್ಚಿಡಲಾಗಿದೆ.

ಒಂದು ಕನ್ನಡಿ ಹಣೆಗೆ ಕಾಡಿಗೆ ಕರಡಿಗೆ
ಪೆನ್ನು ಪೌಡರು ಕ್ಲಿಪ್ಪು ಸೆಂಟು
ಬಿಳಿ ಹಾಳೆ ಮತ್ತು ನೂಲುಂಡೆ ಇರಬಹುದು
ಗುಂಡಿ, ಸೂಜಿ ಮತ್ತು ಅಡಿಕೆ ಹೋಳೂ.
ಇರಬಹುದು ಹುಣಸೆ ಬೀಜಗಳೂ!

-ಹೀಗೆ ಹಲವು ವಸ್ತು, ವಿಚಾರಗಳು ಇಲ್ಲಿ ಬಂದು ಹೋಗುತ್ತವೆ. ಪ್ರತಿಯೊಂದು ವಸ್ತು, ಭಾವಗುಚ್ಛದ ನಡುವೆ ಅದಕ್ಕೆ ಸರಿಹೊಂದುವ ವೈದೇಹಿಯವರ ಕವನಗಳನ್ನು ಒಂದೊಂದಾಗಿ ಪೋಣಿಸಲಾಗಿದೆ. ಜೊತೆಗೆ ವೈದೇಹಿಯವರ ‘ಮಲ್ಲಿನಾಥನ ಧ್ಯಾನ’ ಪ್ರಬಂಧ ಸಂಕಲನದ ಒಂದು ಲೇಖನವೂ ಇಲ್ಲಿ ಸೇರಿಕೊಂಡು ಚೆಂದದೊಂದು ನಾಟಕವಾಗಿದೆ.

ಮುಖ್ಯ ಕವನದ ಮಧ್ಯೆ ಉಳಿದ ಬಿಡಿ ಕವನಗಳನ್ನು ಹೊಂದಿಸಿಕೊಂಡು ಹೋಗಿರುವ ರೀತಿಯೇ ಇಲ್ಲಿ ಅನನ್ಯ.

ಮರದ ಮುಚ್ಚಿಗೆಯಡಿ ಕೆಂಪು ನೆಲದ ತಂಪು
ತೇದಷ್ಟು ಸವೆಯದಾ ನೆನಪು

-ಅನ್ನುವಾಗ ಹಳೆಯ ನೆನಪು ಹೊತ್ತ ತಾಯಿ ಬರುತ್ತಾಳೆ. ತನ್ನ ಪಿತ್ರಾರ್ಜಿತವಾದ ಒಡವೆ, ಆಭರಣಗಳನ್ನು ಹಂಚುತ್ತಾ ಹಳೆಯ ಪೆಟ್ಟಿಗೆಯೊಳಗಿನ ನೆನಪುಗಳಿಗೆ ಜಾರುತ್ತಾಳೆ. ಅಲ್ಲೊಂದು ಕವನ ಕಥೆಯಾಗುತ್ತದೆ. ಅಷ್ಟರಲ್ಲಿ ಮೊಬೈಲು ಹಿಡಿದುಕೊಂಡ ಮೊಮ್ಮಗಳು ಬರುತ್ತಾಳೆ. ‘ಅವನ’ ಅಗಲಿಕೆಯ ನೋವು ನೀಗಲು ಗಜ್ಜುಗದ ಕಾಯಿ ತೇಯುವೆಯಾ ಎಂದು ಕೇಳುತ್ತಾಳೆ. ಆಗ ಬೆರಣಿ ತಟ್ಟುವ ಹುಡುಗಿಯ ಕಥೆ ಮೂಡಿಬರುತ್ತದೆ. ಅದು ಮುಗಿಯುತ್ತಿದ್ದಂತೆ ಮತ್ತೆ ‘ವ್ಯಾನಿಟಿ ಬ್ಯಾಗಿನಲ್ಲಿ ಕೈ ಹಾಕಿ ನೋಡುವುದು ಉಚಿತವಲ್ಲ’ ಎಂದು ಎಚ್ಚರಿಸುತ್ತಾರೆ ಹುಡುಗಿಯರು. ಜೊತೆಗೆ ವ್ಯಾನಿಟಿ ಬ್ಯಾಗಿನ ಇನ್ನೇನೋ ವಸ್ತುಗಳು ಹೊರಬರುತ್ತವೆ. ಅದಕ್ಕನುಗುಣವಾಗಿ ಇನ್ನೊಂದು ಕವನ.. ಹೀಗೆ ಕವನಗಳ ಪೋಣಿಕೆ ಮುಂದುವರಿಯುತ್ತದೆ. ಅಮ್ಮನ ಸೀರೆ, ಸೂರ‌್ಯ ಬೇಕು, ಅಪೂರ್ವ ಕುಮಾರಿಯ ಸ್ವಯಂವರ, ಅಡುಗೆ ಮನೆ ಹುಡುಗಿ, ಮದುವೆಯ ನಾಟಕ, ಲಾಲಿ ಹಾಡು.. ಹೀಗೆ ಹಲವು ಕವನಗಳು ರಂಗದಲ್ಲಿ ಮೈತಳೆಯುತ್ತವೆ.

ಇಲ್ಲಿ ಗದ್ಯರೂಪಿ ಸಂಭಾಷಣೆ ಕಡಿಮೆ. ಕವನಗಳ ಸಾಲುಗಳೇ ಇಲ್ಲಿ ಮಾತುಗಳಾಗಿವೆ. ಸಾಲಿನಿಂದ ಸಾಲಿಗೆ ವಿವರ ನೀಡುತ್ತಾ ಕಥನ ಕವನದಂತೆ ಸ್ವಾರಸ್ಯಕರವಾಗಿರುವ ಕವನಗಳನ್ನೇ ಇಲ್ಲಿ ಸೇರಿಸಿಕೊಳ್ಳಲಾಗಿದೆ.

ಹಾಡುಗಳೇ ಇಲ್ಲಿ ಲಯಬದ್ಧವಾಗಿ ಸಂಭಾಷಣೆಯ ರೂಪ ತಳೆಯುವುದರಿಂದ ಕೇಳುವುದಕ್ಕೂ ಹಿತವಾಗಿರುವುದು ಮುಖ್ಯ. ಅದಕ್ಕೆ ತಕ್ಕಂತೆ ಅಭಿನಯಿಸಿದ ಕಲಾವಿದೆಯೆಲ್ಲರ ಶಾರೀರ ಹಾಗೂ ಸಂಗೀತ ಸಂಯೋಜನೆ ಇಂಪಾಗಿ ಮುದ ನೀಡುತ್ತವೆ. ಹಲವು ಕಂಠಗಳು ಸೇರಿ ಹಾಡುವಾಗಿನ ಸಿಂಕ್ರೊನೈಸೇಷನ್ ಅದ್ಭುತ. ಚೆಂದದ ಕಲಾವಿದೆಯರ, ಕಲಾವಿದರ ಚುರುಕು ಅಭಿನಯ ಖುಷಿಗೊಳಿಸುತ್ತದೆ.

ವೈದೇಹಿ ಅವರ ಕವನಗಳನ್ನು ರಂಗರೂಪಕ್ಕಿಳಿಸಿ, ನಿರ್ದೇಶಿಸುವಲ್ಲಿ ಎನ್.ಮಂಗಳಾ ಯಶಸ್ಸು ಪಡೆದಿದ್ದಾರೆ. ಕಲಾ ನಿರ್ದೇಶಕ ಅರುಣ್ ಸಾಗರ್ ವಿನ್ಯಾಸಗೊಳಿಸಿರುವ ಬೃಹದಾಕಾರದ ವ್ಯಾನಿಟಿ ಬ್ಯಾಗ್ ನೆನಪಿನಲ್ಲುಳಿಯುತ್ತದೆ. ನೂತನವಾಗಿ ಉದ್ಘಾಟಿಸಲಾದ ಕಲಾ ಕಾರ‌್ಯಕ್ರಮಗಳನ್ನು ಆಯೋಜಿಸುವ ಸಂಸ್ಥೆ ‘ಸರ್ವಸ್ವ-ರಂಗದ ರಂಗಾಂತರಂಗ’ದ ವೇದಿಕೆಯ ಆಶ್ರಯದಲ್ಲಿ ಸಂಚಾರಿ ಥಿಯೇಟರ್ ನಟಿಸಿದ ನಾಟಕವಿದು.

ವಿದ್ಯಾರಶ್ಮಿ ಪೆಲತ್ತಡ್ಕ

LINK- http://vijaykarnataka.indiatimes.com/articleshow/21731013.cms

v bag

 

ಆತ್ಮೀಯ ಸ್ನೇಹಿತರೇ,

ಕನ್ನಡ ನಾಡಿನ ಹೆಮ್ಮೆಯ ಲೇಖಕಿ ವೈದೇಹಿಯವರ ಕಾವ್ಯಮಾಲಿಕೆಯನ್ನಿಟ್ಟುಕೊಂಡು `ವ್ಯಾನಿಟಿ ಬ್ಯಾಗ್’ ಅನ್ನುವ ನಾಟಕ ಮಾಡಲಾಗಿದ್ದು, ಈ ನಾಟಕ ಕನ್ನಡ ರಂಗಭೂಮಿಯಲ್ಲಿ ಅಪರೂಪದ ಪ್ರಯೋಗವಾಗಿದ್ದು, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗಿದೆ. ಸಂಚಾರಿ ಥಿಯೇಟರ್ನವರು ಅಭಿನಯಿಸಿರುವ `ವ್ಯಾನಿಟಿ ಬ್ಯಾಗ್’ ನಾಟಕಕ್ಕೆ ರಂಗಕ ರ್ಮಿ ಮಂಗಳಾ.ಎನ್ ಅವರ ದಕ್ಷ ನಿರ್ದೇಶನವಿದೆ. ಎಲ್ಲೆಡೆ ಯಶಸ್ವಿ ಪ್ರದರ್ಶನ ಕಂಡಿರುವ `ವ್ಯಾನಿಟಿ ಬ್ಯಾಗ್’ ಈಗ ಬೆಂಗಳೂರಿನ ರಂಗಪ್ರಿಯರಿಗಾಗಿ ಹನುಮಂತರಂಗದ ಕೆ.ಹೆಚ್.ಕಲಾಸೌಧದಲ್ಲಿ ಪ್ರದರ್ಶನಗೊಳ್ಳಲಿದೆ. ನಾಟಕ ಪ್ರದರ್ಶನವನ್ನು `ಸರ್ವಸ್ವ’ ತಂಡವು ಹಮ್ಮಿಕೊಂಡಿದೆ.

Sarwasva

‘ಸರ್ವಸ್ವ’ ಸಂಸ್ಥೆಯ ಉದ್ಘಾಟನೆ ಈ ನಾಟಕ ಪ್ರದರ್ಶನದ ಜೊತೆಗೆ `ಸರ್ವಸ್ವ’ ಅನ್ನುವ ರಂಗತಂಡದ ಸಂಸ್ಥೆಯು ಕೂಡ ಉದ್ಘಾಟನೆಯಾಗಲಿದೆ. ರಂಗಭೂಮಿ, ನೃತ್ಯ, ಸಂಗೀತ, ಸಿನಿಮಾ ಇನ್ನು ಹಲವು ಕಲಾ ಮಾಧ್ಯಮಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ, ಆ ಮೂಲಕ ಸಾಂಸ್ಕೃತಿಕ ಜಗತ್ತಿನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು, ನಾಟಕಗಳನ್ನು ಮಾಡುವ ಅಪೂರ್ವ ಯೋಜನೆಗಳೊಂದಿಗೆ `ಸರ್ವಸ್ವ’ ತಂಡವು ಪ್ರಾರಂಭವಾಗುತ್ತಿದೆ. ಈಗಾಗಲೇ ರಂಗಭೂಮಿ, ನೃತ್ಯ ಇನ್ನು ಹಲವು ಮನರಂಜನಾ ಮಾಧ್ಯಮಗಳಲ್ಲಿ ಕೆಲಸ ಮಾಡಿ, ಆ ನೆಲದಲ್ಲಿ ಅಲ್ಪಸ್ವಲ್ಪ ಕೃಷಿ ಮಾಡಿ, ಅನುಭವ ಪಡೆದ ಸಮಾನ ಮನಸ್ಕರ ತಂಡವು `ಸರ್ವಸ್ವ’ದಲ್ಲಿ ಸದಸ್ಯರಾಗಿದ್ದಾರೆ. ಒಟ್ಟಾರೆಯಾಗಿ ಕಲಾಮಾಧ್ಯಮದ ಎಲ್ಲ ವಿಭಾಗಗಳಲ್ಲಿ ಎಷ್ಟು ಸಕ್ರೀಯವಾಗಿ ದುಡಿಯಲಿಕ್ಕೆ ಸಾಧ್ಯವಾಗುತ್ತೋ ಅಷ್ಟು ದುಡಿಯುವುದು ಈ ತಂಡದ ಪರಮ ಗುರಿ. ಸಂಸ್ಥೆಯು ಒಳ್ಳೆಯ ಉದ್ದೇಶದೊಂದಿಗೆ ಸಹೃದಯವಾಗಿ ದುಡಿಯುವ ಮನಸ್ಸುಗಳು, ನಮ್ಮ ಕೆಲಸವನ್ನು ಬೆಂಬಲಿಸುವ ರಂಗಪ್ರಿಯರ ಸಹಕಾರದೊಂದಿಗೆ, ರಂಗಭೂಮಿಯ ಹಿರಿಯರ ಆಶೀರ್ವಾದ, ಸಲಹೆ ಸೂಚನೆಗಳೊಂದಿಗೆ ಉದ್ಘಾಟನೆಯಾಗುತ್ತಿದೆ.

ಆ ದಿನದ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಸಂಗೀತ ನಿರ್ದೇಶಕರು, ಗೀತರಚನೆಕಾರರು, ಆಗಿರುವ ಕೆ.ಕಲ್ಯಾಣ್, ಸಂಚಾರಿ ರಂಗತಂಡದ ಮುಖ್ಯಸ್ಥೆಯಾಗಿರುವ ಎನ್.ಮಂಗಳಾ ಹಾಗೂ ಉದ್ಯಮಿಗಳಾದ ಎಂ.ಗೋಪಾಲಕೃಷ್ಣ ಸೋಮಯಾಜಿಯವರು ಭಾಗವಹಿಸಲಿದ್ದಾರೆ. `ಸಂಚಾರಿ’ ಹಾಗೂ `ಸರ್ವಸ್ವ’ ತಂಡದ ಎಲ್ಲ ಸದಸ್ಯರು ಸೇರಲಿದ್ದಾರೆ. ಈ ಕ್ಷಣಗಳಲ್ಲಿ ಸ್ನೇಹಿತರು, ಹಿತೈಷಿಗಳು ಆದಂತಹ ತಾವೆಲ್ಲರೂ ನಮ್ಮೊಂದಿಗೆ ಭಾಗಿಯಾದರೆ ತುಂಬಾ ಚೆನ್ನ ಎಂಬುದು ನಮ್ಮ ಅರಿಕೆ.

  • ದಿನಾಂಕ : 03, ಆಗಸ್ಟ್ 2013, ಸಮಯ ಸಾಯಂಕಾಲ 6.30, ಕೆ. ಹೆಚ್. ಕಲಾಸೌಧ, ಹನುಮಂತನಗರ

    ಕಾರ್ಯಕ್ರಮದಲ್ಲಿ ತಾವುಗಳು ಭಾಗವಹಿಸಲಿಕ್ಕೆ, ನಾಟಕವನ್ನು ನೋಡಲಿಕ್ಕೆ, ಟಿಕೇಟ್ಗಳಿಗಾಗಿ ಹಾಗೂ ಇನ್ನಿತರ ಮಾಹಿತಿಗಾಗಿ `ಸರ್ವಸ್ವ’ ತಂಡದ ಸಂಸ್ಥಾಪಕರಾಗಿರುವ ನಾಗರಾಜ ಸೋಮಯಾಜಿಯವರನ್ನು ಈ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.

    ಮೊ: 9986474787, 9880046769

Vanity Bag162