“ಜೀವನದಲ್ಲಿ ಬಹಳಷ್ಟು ಅನುಭವಗಳಿಗೆ ತೆರೆದುಕೊಂಡಿರುತ್ತೇವೆ. ಬಹಳ ಶಾಲೆ ಕಾಲೇಜುಗಳನ್ನು ದಾಟಿ ಬಂದಿರುತ್ತೇವೆ. ಬಹಳಷ್ಟು ಸ್ನೇಹಿತರನ್ನು ಜೊತೆಗೂಡಿರುತ್ತೇವೆ. ಆದರೆ ಎಲ್ಲರೂ ಎಲ್ಲವೂ ನೆನಪಿನ ಪಟಲದಲ್ಲಿ ಇದ್ದೇ ಇರುತ್ತದೆ ಎಂಬ ಗ್ಯಾರಂಟಿ ಇಲ್ಲ. ಆದರೆ ಒಂದಷ್ಟು ಜನ ಕೂಡಿ ಮಾಡಿದ ನಾಟಕದ ಅನುಭವವನ್ನು ನಾವು ಖಂಡಿತ ಮರೆತಿರುವುದಿಲ್ಲ. ಇದು ರಂಗಭೂಮಿಯ ಗುಣ. ಅಜ್ಜಿ ಕೊಟ್ಟ ಮಿಠಾಯಿಯ ಹಾಗೆ” – ಹೀಗೆ ಹೇಳುತ್ತಾ ಅಭಿನಯದ ಕೆಲವು ವಿವರಗಳನ್ನು ಪೂರ್ವರಂಗದ ಸ್ನೇಹಿತರೊಂದಿಗೆ ಹಂಚಿಕೊಂಡವರು ಕೃಷ್ಣಮೂರ್ತಿ ಕವತ್ತಾರ್.

ನಟನಾದವ ಮೊದಲು ತಾನು ಮಾಡುವ ಕ್ರಿಯೆಯನ್ನು, ಪಾತ್ರವನ್ನು ನಂಬಬೇಕು. ತಾನು ನಂಬಿದ್ದನ್ನು ಮಾಡಲು ನಿಖರ ಉದ್ದೇಶ ಹೊಂದಿದವನಾಗಿರಬೇಕು. ಆಗ ಸತ್ಯವಾಗಿ ಅವನು ಪ್ರೇಕ್ಷಕರೊಂದಿಗೆ ಸಂವಹನ ಮಾಡಬಲ್ಲ. ವಾಸ್ತವದಲ್ಲಿ ನಾವು ಬದುಕುತ್ತಿದ್ದರೂ ನಾವು ಅಭಿವ್ಯಕ್ತಿಸುವಾಗ ಸಹಜವೋ ಎಂಬಂತೆ ಅಭಿನಯಿಸುತ್ತಿದ್ದರೂ ಭಾರತೀಯ ಮನಸ್ಸುಗಳಲ್ಲಿ ಒಂದು ಶೈಲೀಕೃತ ಆಂಗಿಕ ಭಾಷೆ ಮತ್ತು ವಾಚಿಕ ನಾಟಿಬಿಟ್ಟಿದೆ. ಪುರಾಣದ ಪಾತ್ರಗಳನ್ನು ನಾವು ಅಭಿನಯಿಸುವಾಗ ನಮಗೇ ತಿಳಿಯದ ಹಾಗೆ ನಮ್ಮ ದೇಹದ ಚಲನೆ, ನಾವು ಆಡುವ ಮಾತು ಬದಲಾಗಿಬಿಡುತ್ತದೆ. ಅದಕ್ಕೆ ನಮಗೆ ನಮ್ಮದೇ ಆದ ಸಾಹಿತ್ಯಿಕ, ಸಾಂಸ್ಕೃತಿಕ ಪರಂಪರೆ ಇದೆ. ದೇಶದುದ್ದಗಲಕ್ಕೂ ಬೇರೆ ಬೇರೆ ನೃತ್ಯ ಪ್ರಕಾರಗಳಿವೆ. ಜಾನಪದ ಕುಣಿತಗಳಿವೆ. ಭರತನ ನಾಟ್ಯಶಾಸ್ತ್ರ ಎಂಬ ಬೃಹತ್ ಗ್ರಂಥ ಇದೆ. ನಾವು ತಿಳಿದೋ ತಿಳಿಯದೆಯೋ ಇದೆಲ್ಲದರಿಂದ ಪ್ರಭಾವಿತರಾಗಿರುತ್ತೇವೆ. ಆದರೆ ನಮ್ಮೊಳಗೆ ರೂಢಿಸಿಕೊಂಡಿರುವುದಿಲ್ಲ. ನಟನಾಗಬೇಕಾದವನು ಇವೆಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾ ತನ್ನ ದೇಹದೊಳಗೆ, ಮನಸ್ಸಿನೊಳಗೆ ಇವುಗಳನ್ನು ಇಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗುತ್ತದೆ.

Advertisements