ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಹುಟ್ಟು, ಸ್ಥಳ , ಪರಿಸರ , ಸಂಸಾರ ,  ಸಂಸ್ಕಾರ , ಗುರುಗಳು , ಹಿರಿಯರು , ಸಂಬಂಧಗಳು , ಪದ್ದತಿಗಳು , ಆಚರಣೆಗಳು , ಹಾಡು , ಕತೆ , ಕವಿತೆ , ಓದು, ಕಲಿಕೆ , ಆಟ , ಪಾಠ , ತೋಟ , ಬೀದಿ , ಗುಡಿ , ಗೋಪುರ , ದೇವರು , ದಿಂಡರು , ಸ್ನೇಹಿತರು , ಪರಿಚಿತರು – ಎಲ್ಲವೂ , ಎಲ್ಲರೂ , ಆತನ ಬದುಕಿನ ಮೇಲೆ ಪ್ರಭಾವ ಬೀರುವ ಅಂಶಗಳಾಗಿರುತ್ತವೆ . ತನ್ನ ಬದುಕಿನ ಜೊತೆ ಹುಟ್ಟಿನಿಂದ ಬರುವಂತಹವು ಇವಾದರೆ , ಇವುಗಳ ಪ್ರಭಾವದಿಂದ ಆತ ತನ್ನ ಶಕ್ತಿಯನ್ನು ಪಡೆದುಕೊಳ್ಳುತ್ತಾ , ಕೆಲವೊಮ್ಮೆ ರೂಪಿಸಿಕೊಳ್ಳುತ್ತಾ ಸಾಗುತ್ತಾನೆ. ಬೇರು ಭದ್ರವಾದಷ್ಟು ವ್ಯಕ್ತಿ ಶಕ್ತಿವಂತನಾಗುತ್ತಾನೆ. ನಂತರ ಕನಸು ಕಾಣುತ್ತಾನೆ . ಕನಸು ಕಾಣುವ , ಕನಸಿದ್ದನ್ನು ಕನವರಿಸುವ , ಕನವರಿಸುತ್ತಾ ನನಸು ಮಾಡಿಕೊಳ್ಳಲು ಸಾಗುವ ಪಯಣ , ಪ್ರತಿಯೊಬ್ಬರ ಜೀವನದಲ್ಲೂ ನಡೆಯುವಂತದ್ದೇ. ಈ ಚಲನಶೀಲ ಪ್ರಕ್ರಿಯೆಗೊಂದು ರೂಪಕೊಡುವ ಪ್ರಯತ್ನವನ್ನು ಮಕ್ಕಳಿಂದ ಮಾಡಿಸುವ ಪ್ರಯತ್ನದಲ್ಲಿ , ಶಿವಕುಮಾರ್ ಸುಣಗಾರ್ ಒಂದು ದೊಡ್ಡ ಮರದ ಚಿತ್ರವನ್ನು ಚಿತ್ರಿಸಿ ಮಕ್ಕಳಿಗೆ ನೀಡುತ್ತಾರೆ. ಮಕ್ಕಳು ನೆನಪಿನಲ್ಲಿಟ್ಟುಕೊಂಡದ್ದನ್ನೆಲ್ಲಾ ಬೇರಿನ ಭಾಗದಲ್ಲಿ ಬರೆಯುತ್ತಾರೆ. ಅವರು ತಾವು ಯಾವುದರಲ್ಲಿ ತುಂಬ ಶಕ್ತರೆಂದು ಎನಿಸುತ್ತಾರೋ ಅವೆಲ್ಲವನ್ನೂ ಚಿತ್ರದ ಮೂಲಕವೋ , ಅಕ್ಷರಗಳ ಮೂಲಕವೋ ಕಾಂಡದಲ್ಲಿ ಹಿಡಿದಿಡಲು ಯತ್ನಿಸುತ್ತಾರೆ . ಇನ್ನು ತಮ್ಮ ಕನಸಿನ ಲೋಕದ ವಿಹಾರ , ದ್ರಶ್ಯ , ಎಲ್ಲವನ್ನೂ ಎಲೆಗಳಲ್ಲಿ ಹುದುಗಿಸುವ ಪ್ರಯತ್ನ ಮಾಡಿದ್ದಾರೆ. ಇದೊಂದು ಮಕ್ಕಳ ಸುಪ್ತ ಭಾವದ ಅಭಿವ್ಯಕ್ತಿ.

 

Advertisements