ಸಂಚಾರಿ ಥಿಯೇಟರ್ ರಂಗಕರ್ಮಿ, ರಂಗಾಯಣದ ಕಲಾವಿದ ಬಸವರಾಜ ಕೊಡಗೆ ನೆನಪಿನಲ್ಲಿ ಆತನ ಮಡದಿ ರಂಗಾಯಣದ ಕಲಾವಿದೆ ಶ್ರೀಮತಿ ಬಿ.ಎನ್.ಶಶಿಕಲಾ ಅಭಿನಯಿಸುವ “ಕಸ್ತೂರಬಾ” ನಾಟಕವನ್ನು ಇದೇ ಜೂನ್ 27 ರಂದು ಅರ್ಪಿಸುತ್ತಿದೆ. ಎಸ್.ರಾಮನಾಥ, ರಂಗಾಯಣ ಈ ನಾಟಕವನ್ನು ರಚಿಸಿದ್ದಾರೆ. ಶಶಿಧರ್ ಭಾರಿಘಾಟ್ ನಿರ್ದೇಶಿಸಿದ್ದಾರೆ.

ಬಸವರಾಜ ಕೊಡಗೆ: ಬಾಲ್ಯದಿಂದಲೇ ಬಣ್ಣದ ಬದುಕಿನ ಸೆಳೆತಕ್ಕೆ ಒಳಗಾಗಿ ಬದುಕಿನುದ್ದಕ್ಕೂ ಬಯಸಿದ್ದನ್ನೇ ಬದುಕಿದ ಬಸವರಾಜ ಕೊಡಗೆ ರಾಜ್ಯದ ಸಾಂಸ್ಕೃತಿಕ ಮತ್ತು ಪ್ರಗತಿಪರ ರಂಗ ಜಾಥಾ ಮತ್ತು ಸಾಕ್ಷರತಾ ಚಳುವಳಿಯಲ್ಲಿದ್ದವರು. ಎಡಪಂಥೀಯ ವಿಚಾರಗಳು ಮತ್ತು ಧೋರಣೆಗಳಿಗೆ ಮಾರುಹೋಗಿ ಅದನ್ನೇ ಬಹುಮಟ್ಟಿಗೆ ಮೈಗೂಡಿಸಿಕೊಂಡಿದ್ದ ಬಸವರಾಜ್ ಎಂದೂ ತನ್ನ ನಂಬಿಕೆ ಮತ್ತು ಅಭಿಪ್ರಾಯಗಳನ್ನು ಬಿಟ್ಟುಕೊಟ್ಟವರಲ್ಲ. ಅಂತೆಯೇ ಸ್ನೇಹಿತರ ವಿಚಾರ, ಅಭಿಪ್ರಾಯಗಳನ್ನು ಹೀಗಳೆಯದೇ, ಮುಗುಳ್ನಕ್ಕು, ಮೌನವಾಗಿ ಇರುತ್ತಿದ್ದರು. ತನ್ನ ಇಪ್ಪತ್ತೈದು ವರುಷಗಳಿಗೂ ಮೀರಿದ ರಂಗಜೀವನದಲ್ಲಿ ಎಂದೂ ಕೈಕಟ್ಟಿ ಕೂರದಿದ್ದ ಬಸವರಾಜ ಕೊಡಗೆ, ರಾಜ್ಯಾದ್ಯಂತ ಐವತ್ತಕ್ಕೂ ಹೆಚ್ಚಿನ ರಂಗಶಿಬಿರಗಳನ್ನು ನಡೆಸಿದ್ದರು. ಆಧುನಿಕ ಕನ್ನಡ ರಂಗಭೂಮಿಯ ಬಹಳಷ್ಟು ನಾಟಕಗಳನ್ನು ಹವ್ಯಾಸಿ ರಂಗಭೂಮಿಯಲ್ಲಿ ಪ್ರಯೋಗಿಸಿ, ತನ್ನ ವಿಚಾರ, ಧೋರಣೆಗಳನ್ನು ಬೀದಿ ನಾಟಕಗಳನ್ನು ಬರೆಯುವುದರಲ್ಲಿ ಅಭಿವ್ಯಕ್ತಿಸಿದ್ದರು. ಅವರು ನಿರ್ದೇಶಿಸಿದ “ತಮಾಷ” ಎಂಬ ಬೀದಿ ನಾಟಕ ನೂರಕ್ಕೂ ಹೆಚ್ಚು ಪ್ರಯೋಗಗಳನ್ನು ನೀಡಿ, ಮನ್ನಣೆ ಗಳಿಸಿದೆ. ನಿರಂತರ ಹದಿಮೂರು ವರುಷಗಳ ಕಾಲ ರಂಗಾಯಣದ ಎಲ್ಲಾ ನಾಟಕಗಳಲ್ಲಿ ನಟಿಸುತ್ತಲೇ, ಪ್ರತಿಬಾರಿ ಮಕ್ಕಳಿಗಾಗಿ ತಾನೇ ನಾಟಕ ಬರೆದು ನಿರ್ದೇಶಿಸುತ್ತಿದ್ದರು. ಬದುಕಿದ್ದು ನಲವತ್ತು ವರುಷವಾದರೂ ತನ್ನ ರಂಗಜೀವನದ ಪ್ರತಿದಿನವನ್ನೂ ರಂಗಭೂಮಿಗಾಗಿಯೇ ಮೀಸಲಿಟ್ಟಿದ್ದರು. ಇಂದಿಗೆ 12 ವರುಷಗಳ ಹಿಂದೆ, 2002ನೇ ಜೂನ್ 10 ರಂದು ಆತ ನೆನಪು ಮಾತ್ರ ಉಳಿಸಿ ಹೋದರು.

Advertisements