ಸಂಚಾರಿ ಥಿಯೇಟರ್ ಬೇಸಿಗೆ ಮಕ್ಕಳ ಶಿಬಿರದ ಸಂಗೀತ ನಿರ್ದೇಶಕರಾದ ಗಜಾನನ.ಟಿ.ನಾಯ್ಕ ಎಲ್ಲರ ಪ್ರೀತಿಯ ಗಜ ಸರ್. ಸಂಚಾರಿ ಥಿಯೇಟರ್ ಪ್ರಾರಂಭವಾದಂದಿನಿಂದ ಇವತ್ತಿನವರೆಗೆ ಈ ತಂಡದ ಎಲ್ಲ ನಾಟಕಗಳಿಗೂ ಇವರೇ ಸಂಗೀತ ನಿರ್ದೇಶಕರು. ಸಂಸ್ಥಾಪಕರಲ್ಲೊಬ್ಬರಾದ ಗಜಾನನ ಈ ತಂಡದ ಆಧಾರಸ್ತಂಭ.

1094941_649920965037729_585118880_n

ಹೊನ್ನಾವರದ ಗಜಾನನ.ಟಿ.ನಾಯ್ಕ ವಿದ್ಯಾರ್ಥಿಯಾದಾಗಿನಿಂದಲೂ ಅಲ್ಲಿನ ಕಂಪನಿ ನಾಟಕಗಳಲ್ಲಿ ನಡು ನಡುವೆ ಬರುವ ಸಿನಿಮಾ ಹಾಡುಗಳಿಗೆ ಹಾರ್ಮೋನಿಯಂ ನುಡಿಸಲು ಹೋಗುತ್ತಿದ್ದರು. ಗೆಳೆಯರೊಬ್ಬರ ಸಹಾಯದಿಂದ ನೀನಾಸಂಗೆ ಬಂದು ಸೇರಿಕೊಂಡರು. ಅಲ್ಲಿ ಸಂಗೀತದ ಗುರುಗಳಾದ ನಾಗರಾಜ ಅವರಿಂದ ರಂಗಸಂಗೀತದ ಪರಿಚಯವಾಗತೊಡಗಿತು. ಬಿವಿ.ಕಾರಂತರು,ಶ್ರೀನಿವಾಸಭಟ್ ಅವರೊಡನೆ ಕೆಲಸ ಮಾಡುವ ಅವಕಾಶವೂ ಸಿಕ್ಕಿತು. “ಭಗವದಜ್ಜುಕೀಯ” ನಾಟಕ ನಿರ್ದೇಶಿಸಲು ಕಾರಂತರು ನೀನಾಸಂಗೆ ಬಂದಿದ್ದಾಗ ಗಜಾನನ ಅವರಿಗೆ ನಟಿಸುವ ಅವಕಾಶ ಕೊಟ್ಟು, ಅವರಿಂದ ನಟನೆ ಮಾಡಿಸಲು ಸಾಧ್ಯವಾಗದೆ ‘ನೀನೊಬ್ಬಅತ್ಯಂತ ಕೆಟ್ಟ ನಟ’ ಎಂದು ಬಯ್ದು, ‘ನಿನಗೆ ಈ ಮ್ಯೂಸಿಕ್ ಪಿಟ್ ಸರಿ. ನೀನಿಲ್ಲೇ ಕುಳಿತುಕೋ’ ಎಂದು ಆ ಜಾಗ ತೋರಿಸಿದ್ದೇ ಹಾರ್ಮೋನಿಯಂ ನುಡಿಸಲು ಹೇಳಿದರು. ಅಂದಿನಿಂದ ಗಜಾನನ ಅವರಿಗೆ ಅದೇ ಜಾಗ ಗಟ್ಟಿಯಾಯಿತು. ಅಲ್ಲೇ ಅವರು ಬಹಳಷ್ಟು ಪ್ರಯೋಗಗಳನ್ನು ಮಾಡತೊಡಗಿದರು. ಅದೇ ನಾಟಕದ ಸಂದರ್ಭದಲ್ಲಿ ಕಾರಂತರು ಗಜಾನನ ಅವರನ್ನು ರಾತ್ರಿ ಹೊತ್ತು ಕಾಡಿನೊಳಗೆ ಕರೆದುಕೊಂಡು ಹೋಗಿ ಅಲ್ಲಿಯ ಶಬ್ಧ, ನಿಶ್ಯಬ್ಧಗಳ ಬಗ್ಗೆ ಅವುಗಳ ಶೃತಿಗಳ ಬಗ್ಗೆ ಪಾಠ ಮಾಡಿದ್ದನ್ನು ನೆನೆಯುತ್ತಾರೆ. ಆದರೂ ಕಾರಂತರೊಡನೆ ಕೆಲಸ ಮಾಡಿದ್ದು ಬಹಳ ಕಡಿಮೆ ಎಂದು ಕೊರಗಿಕೊಳ್ಳುವ ಗಜಾನನ, ಕೆಲಸ ಮಾಡಿದ “ಭಗವದಜ್ಜುಕೀಯ”ಮತ್ತು “ಅಹಲ್ಯೆ” ನಾಟಕಗಳ ಸಂದರ್ಭದಲ್ಲಿಯೇ ಬಹಳಷ್ಟು ಕಲಿತೆ ಎಂದು ಸಂಭ್ರಮಿಸುತ್ತಾರೆ. ಹಾಡು ಸೂಚಿಸುವ ಮೂಡ್ ಗೆ ರಾಗಸಂಯೋಜನೆ ಮಾಡುವ ಬದಲು ಸಾಹಿತ್ಯ ಯಾವ ಭಾವವನ್ನು ಬೇಡುತ್ತದೋ ಆ ಭಾವವನ್ನು ವ್ಯಕ್ತಪಡಿಸಲು ಸ್ವರಸಂಯೋಜನೆ ಮಾಡುವ ಕಾರಂತರ ಶೈಲಿಯಿಂದ ತನಗೆ ಬೇರೊಂದು ರೀತಿಯ ಕಲಿಕೆ ಪ್ರಾರಂಭವಾಯಿತೆನ್ನುತ್ತಾರೆ. ಶಬ್ಧ, ಧ್ವನಿ ಇವುಗಳ ಬಗ್ಗೆಯೂ ತಮ್ಮ ಕಿವಿ ತೆರೆದುಕೊಳ್ಳುವುದನ್ನು ಕಲಿತರು. ಶ್ರೀನಿವಾಸಭಟ್ ಅವರಿಂದ ರಂಗಸಂಗೀತದ ನಿರ್ವಹಣೆ ಕಲಿತರು. ಏಕಕಾಲದಲ್ಲಿ ಬಹಳಷ್ಟು ವಾದ್ಯಗಳನ್ನು ಬಳಸುವ ಮತ್ತು ನಟನಟಿಯರೊಂದಿಗೆ ತಾವೂ ಅಭಿನಯಿಸುತ್ತಾ ವಾದ್ಯ ನುಡಿಸುವ ಪ್ರಕ್ರಿಯೆ ನಾಟಕಕ್ಕೆ ಎಷ್ಟು ಮುಖ್ಯ ಎಂಬುದನ್ನು ಮನಗಂಡರು.ನಾಟಕ ಕಟ್ಟುವ ಸಂದರ್ಭದಲ್ಲಿ ಸಂಗೀತಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕವಾಗಿ ಟಿಪ್ಪಣಿ ಮಾಡಿಕೊಳ್ಳುವ ಪಾಠ ಕಲಿತರು. ನೀನಾಸಂನ
ಒಂದು ವರುಷದ ಡಿಪ್ಲಮೋ ಮತ್ತು ಒಂದು ವರುಷದ ತಿರುಗಾಟದ ನಂತರ ಬೆಂಗಳೂರಿಗೆ ಬಂದರು.

390990_234897969986494_1601940480_n

ಯಾರೇ ಬಂದರೂ ತಮ್ಮವರನ್ನಾಗಿ ಮಾಡಿಕೊಳ್ಳುವ ಬೆಂಗಳೂರು ಗಜಾನನ ಅವರಿಗೂ ಸಾಕಷ್ಟು ಅವಕಾಶಗಳನ್ನು ತೆರೆದಿತ್ತು.ಗೆಳೆಯ ಯಾದವನ ಜೊತೆ ಬಹಳಷ್ಟು ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದರು. ಬೆಂಗಳೂರು ಸಮುದಾಯಕ್ಕೆ ಖಾಯಂ ಸಂಗೀತ ನಿರ್ದೇಶಕರಾದರು.ಕರ್ನಾಟಕದಾದ್ಯಂತ ಸುತ್ತಾಡಿ ನಾಟಕಗಳಿಗೆ ಸಂಗೀತ ನೀಡಿದರು. ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡುವಾಗ ಮೇಳವನ್ನು ತಯಾರು ಮಾಡುವ ಅವಶ್ಯಕತೆಯನ್ನು ಅರಿತರು. ಯಾಕೆಂದರೆ ವಾದ್ಯಗಾರರು ಕೇವಲ ವಾದ್ಯಗಾರರಾಗಿ, ಹಾಡುವವರು ಕೇವಲ ಹಾಡುಗಾರರಾಗಿ ಕೆಲಸ ನಿರ್ವಹಿಸಿದರೆ ನಾಟಕಕ್ಕೆ ಏನೇನೂ ಸಹಾಯವಾಗುವುದಿಲ್ಲ, ಅವರುಗಳು ಕೂಡ ನಾಟಕದ ಒಳಗೆ ಪಾತ್ರವಾಗಬೇಕು. ಆಗಷ್ಟೇ ನಾಟಕಕ್ಕೆ ಬೇಕಾದಂತಹ,ನಾಟಕ ಬೇಡುವಂತಹ ಪ್ರಮಾಣದ ಶಬ್ಧ, ಧ್ವನಿ, ಭಾವ, ಲಯ, ರಾಗಗಳು ಸೃಷ್ಟಿಯಾಗಲು ಸಾಧ್ಯ ಎಂಬ ಅಂಶದ ಕಡೆಗೇ ಹೆಚ್ಚು ಒತ್ತುಕೊಡುತ್ತಾರೆ.

1794545_367800483362908_2113476156_n

ಸುಮಾರು ಹದಿನೆಂಟು ವರ್ಷಗಳಿಂದ ಕೇವಲ ರಂಗಸಂಗೀತವನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಗಜಾನನ ಬಿಡುವಿಲ್ಲದ ಸಂಗೀತ ನಿರ್ದೇಶಕ. ಸುಮಾರು ನೂರಕ್ಕೂ ಹೆಚ್ಚು ನಾಟಕಗಳಿಗೆ ರಂಗ ಸಂಗೀತ ನೀಡಿದ್ದಾರೆ. ಪ್ರೇಮಾಕಾರಂತರಂತು ಬಿ.ವಿ.ಕಾರಂತರ ನಿರ್ಗಮನದ ನಂತರ ಒಪ್ಪಿಕೊಂಡಿದ್ದು ಗಜಾನನ ಅವರನ್ನೇ. ಅವರ ಎಲ್ಲ ನಾಟಕಗಳಿಗೂ ಇವರದ್ದೇ ಸಂಗೀತ. ಕೆಲವು ನಿರ್ದೇಶಕರಂತು ಗಜಾನನ ಅವರನ್ನೇ ತಮ್ಮ ನಾಟಕಗಳಿಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಸಿ.ಜಿ.ಕೆ, ಇಕ್ಬಾಲ್ ಅಹಮದ್, ಪ್ರಮೋದ್ ಶಿಗ್ಗಾಂವ್, ಸುರೇಶ್ ಆನಗಳ್ಳಿ, ಸೌಮ್ಯ ವರ್ಮ, ಎನ್.ಮಂಗಳಾ, ಜೋಸೆಫ್ ಇವರೆಲ್ಲರೆ ಮೊದಲ ಆಯ್ಕೆ ಗಜಾನನ ಅವರೇ.

 

ಇತ್ತೀಚೆಗೆ ನಾಟಕಗಳ ಪುನರ್ ಪ್ರದರ್ಶನದ ಸಮಯದಲ್ಲಿ ಸಂಗೀತದವರು ತಾಲೀಮಿಗೆ, ಪ್ರದರ್ಶನಗಳಿಗೆ ಸರಿಯಾಗಿ ಸಿಗದೆ ರಂಗಭೂಮಿ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿರುವುದರಿಂದ ಸಿಡಿ ಗಳನ್ನು ಬಳಸುವ ಸಂಸ್ಕೃತಿ ಪ್ರಾರಂಭವಾಗಿದೆ. ರಂಗಸಂಗೀತವನ್ನು ತಾಂತ್ರಿಕವಾಗಿ ದುಡಿಸಿಕೊಳ್ಳುವ ಅನಿವಾರ್ಯತೆ ಮತ್ತು ಅವು ನೀಡುವ ಸವಾಲುಗಳನ್ನು ಎದುರಿಸಬೇಕಾಗಿರುವುದು ಗಜಾನನ ಅವರ ಅನುಭವಕ್ಕೆ ಬರತೊಡಗಿದೆ. ಹಾಗಾಗಿ ಕಾಲ ಬೇಡುವ ಬಹಳಷ್ಟು ವಿಷಯಗಳಿಗೆ ನಾವು ಹೊಂದಿಕೊಳ್ಳಲೇ ಬೇಕಾಗಿದೆ ಎನ್ನುತ್ತಾರೆ. ಜೊತೆಗೆ ಅದನ್ನು ವೃತ್ತಿಪರವಾಗಿ ನಿರ್ವಹಿಸುವುದನ್ನು ಕಲಿಯಬೇಕಾಗಿದೆ ಎನ್ನುತ್ತಾರೆ.

ರಂಗಸಂಗೀತವನ್ನೇ ವೃತ್ತಿಯನ್ನಾಗಿಸಿಕೊಂಡು, ಜೊತೆಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಾಟಕದ ಎಂ.ಎ ಪೂರೈಸಿದರು. ಒಂದು ವರ್ಷ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಂಗ ಸಂಗೀತದ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಈಗ ರಂಗಸಂಗೀತದ ಬಗ್ಗೆ ಪಿ.ಎಚ್.ಡಿ ಮಾಡುತ್ತಿದ್ದಾರೆ.

IF

ಇಷ್ಟೆಲ್ಲ ಚಟುವಟಿಕೆಗಳ ಮದ್ಯೆ ಅವರದ್ದೊಂದು ಕನಸಿದೆ. ಸಿನಿಮಾ ಆರ್ಕೆಸ್ಟ್ರಾ, ಸುಗಮ ಸಂಗೀತದ ಆರ್ಕೆಸ್ಟ್ರಾಗಳಂತೆಯೇ ರಂಗಸಂಗೀತದ ಆರ್ಕೆಸ್ಟ್ರಾವನ್ನು ಕೂಡ ಹೆಚ್ಚು ಪ್ರಚಲಿತಗೊಳಿಸಬೇಕು. ಶ್ರೀಮಂತವಾಗಿ ನಮ್ಮ ನಾಟಕದ ಹಾಡುಗಳನ್ನು ಜನರ ಮುಂದಿಡಬೇಕು ಮತ್ತು ಜನ ಕಿಕ್ಕಿರಿದು ಬಂದು ಕೇಳುವಂತಾಗಬೇಕು ಎಂಬುದು. ರಂಗಸಂಗೀತದಲ್ಲೇ ಕೃಷಿ ಮಾಡುತ್ತಿರುವ ಗಜಾನನ ಅವರ ಎಲ್ಲ ಕನಸುಗಳು ನನಸಾಗಲಿ ಎಂಬುದು ನಮ್ಮ ಹಾರೈಕೆ.

936524_601641149865711_2146918334_n

Advertisements