ಶಿವಕುಮಾರ್ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಗರ ಹಳ್ಳಿಯವರು. ಇಂಜಿನಿಯರಿಂಗ್ ಓದುತ್ತಿದ್ದ ಶಿವಕುಮಾರ್ ಆಕರ್ಷಿತರಾದದ್ದು ಬಣ್ಣಗಳಿಗೆ.ಅವರ ಬಾಲ್ಯದ ಹಲವು ಅನುಭವಗಳು ಮತ್ತು ಅವರೊಳಗೆ ಉಳಿದುಬಿಟ್ಟಿದ್ದ ಅಮೂರ್ತ ಚಿತ್ರಗಳು ಎಲ್ಲವೂ ಹಾಳೆಗಳ ಮೇಲೆ ನಿಧಾನವಾಗಿ ಸಾಕ್ಷಾತ್ಕಾರಗೊಳ್ಳಲು ಪ್ರಾರಂಭಗೊಂಡವು. ನಂತರ ಅವರು ಬೆಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಎಂ.ವಿ.ಎ ಪದವಿ ಪಡೆಯುವ ಮೂಲಕ ತಮ್ಮ ದಾರಿ ಕಂಡುಕೊಳ್ಳಲು ಪ್ರಾರಂಭಿಸಿದರು. ಪ್ರಾರಂಭದಲ್ಲಿ ರಂಗಭೂಮಿಯಲ್ಲಿ ನಿಂತು ತಮ್ಮ ಅಭಿವ್ಯಕ್ತಿಯನ್ನುಪ್ರಯೋಗಿಸುತ್ತಾ ಬಂದರು. ರಂಗವಿನ್ಯಾಸ, ಪರಿಕರ ವಿನ್ಯಾಸ, ವಸ್ತ್ರವಿನ್ಯಾಸ, ನಿರ್ದೇಶನ ಎಲ್ಲದರಲ್ಲೂ ತಮ್ಮ ವಿನ್ಯಾಸದ ಮೂಲಕ ತಮ್ಮದೇ ಆದ ಪ್ರಯೋಗ ನಡೆಸಿದರು. ಸಂಭ್ರಮಿಸಿದರು. ಆಮೇಲೆ ಇದ್ದಕ್ಕಿದ್ದಂತೆ ಎಲ್ಲವನ್ನೂ ಬಿಟ್ಟು ದೆಹಲಿ, ಮುಂಬಯಿ, ಬರೋಡ, ಅಹಮದಾಬಾದ್ ನಗರಗಳಲ್ಲಿ ಸುತ್ತಾಡಿ, ಕೊನೆಗೆ ಅಹಮದಾಬಾದ್ ನಲ್ಲಿ ನೆಲೆನಿಂತರು. ಅಲ್ಲಿ ತಮ್ಮ ಮೂಲ ಆಸಕ್ತಿಯಾದ ಬಣ್ಣಗಳೊಡನೆ ಆಟವಾಡಲು ಪ್ರಾರಂಭಿಸಿದರು. ಅದನ್ನೇ ಧ್ಯಾನಿಸುತ್ತಾ,ಅಲ್ಲಿನ ಯೂನಿವರ್ಸಿಟಿಯಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಕೆಲಸ ಮಾಡುತ್ತಾ ತಮ್ಮಸ್ಟೂಡಿಯೋದಲ್ಲಿ ದೃಶ್ಯಕಲೆಗೆ ಸಂಬಂಧಿಸಿದಂತೆ ತಮ್ಮ ಪ್ರಯೋಗಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. ದೇಶವಿದೇಶಗಳಲ್ಲಿ ತಮ್ಮಕೃತಿಗಳನ್ನು ಪ್ರದರ್ಶನ ಮಾಡಿದ್ದಾರೆ.ನಮ್ಮ ಆಹ್ವಾನವನ್ನು ಪ್ರೀತಿಯಿಂದ ಸ್ವೀಕರಿಸಿ ನಮ್ಮ ಮಕ್ಕಳಿಗಾಗಿ ಅವರೊಡನೆ ಸ್ವಲ್ಪ ಸಮಯ ಕಳೆಯಲು, ಅವರೊಂದಿಗೆ ಆಡಲು ಆಗಮಿಸಿ ಈ ಶಿಬಿರದ ಕಲಾನಿರ್ದೇಶಕರಾಗಿರುವುದು ನಮ್ಮೆಲ್ಲರ ಸೌಭಾಗ್ಯ.

Advertisements