ಕ್ಯಾಂಪಿನ ಕಲಾನಿರ್ದೇಶಕ ಶಿವಕುಮಾರ್ ಸುಣಗಾರ್ ನಿರ್ದೇಶನದಲ್ಲಿ ಮಕ್ಕಳಿಗೆ ಮುಖವಾಡ ತಯಾರಿಕೆಯ ಪರಿಚಯವಾಯಿತು. ಐದು ಗುಂಪಿನಲ್ಲಿ ಕುಳಿತ ಮಕ್ಕಳಿಗೆ ಒಂದಿಷ್ಟು ನ್ಯೂಸ್ ಪೇಪರ್ ಕೊಟ್ಟು ಹರಿದು ಚೂರು ಚೂರು ಮಾಡಿಕೊಳ್ಳಿ ಎಂದು ಹೇಳಿದ್ದೇ ತಡ ಮಕ್ಕಳು ಸ್ವಲ್ಪವೂ ಬಿಡುವು ಕೊಡದೆ ಕೊಟ್ಟಷ್ಟು ಪೇಪರ್ ಗಳನ್ನು ಚಿಂದಿ ಉಡಾಯಿಸಿಬಿಟ್ಟರು. ನಂತರ ದೊಡ್ಡ ದೊಡ್ಡ ಬಲೂನುಗಳನ್ನು ಊದಿ ಐದು ಗುಂಪಿನಲ್ಲಿ ಕುಳಿತ ಮಕ್ಕಳಿಗೆ ನೀಡಲಾಯಿತು. ಆಮೇಲೆ ಅಂಟು ಕೊಟ್ಟದ್ದೇ ತಡ ಪೇಪರ್ ಗಳಿಗೆ ಅಂಟನ್ನು ಅಂಟಿಸಿ ಬಲೂನುಗಳಿಗೆ ಮೆತ್ತಲು ಪ್ರಾರಂಭಿಸಿದರು. ಹೀಗೆಯೇ ಒಂದರ ಮೇಲೆ ಒಂದರಂತೆ ಐದು ಸುತ್ತುಗಳಲ್ಲಿ ಹಚ್ಚಿದರು. ಕೊನೆಗೆ ಬ್ರೌನ್ ಕಲರ್ ಪೇಪರ್ ನಲ್ಲಿ ಮುಕ್ತಾಯ ಹಾಡಿದರು. ಈ ಕೆಲಸ ನಿಭಾಯಿಸಲು ತಂಡಕ್ಕೊಬ್ಬರು ಲೀಡರ್ ಇದ್ದು ಉಳಿದವರು ಅವರೊಡನೆ ಸಹಕರಿಸಿದರು. ಗುಂಪಿನಲ್ಲಿ ಕೆಲಸ ಮಾಡುವುದು ಬಹಳ ಕಷ್ಟದ ಕೆಲಸ. ಪರಸ್ಪರ ಒಬ್ಬರ ಜೊತೆ ಮತ್ತೊಬ್ಬರು ಹೊಂದಿಕೊಳ್ಳಬೇಕು. ತಾಳ್ಮಯಿಂದ ವರ್ತಿಸಬೇಕು.ಒಬ್ಬರಿಗೊಬ್ಬರು ಪೂರಕವಾಗಿ ಕೆಲಸ ಮಾಡಬೇಕು. ಈಗಂತು ಪುಟ್ಟ ಪುಟ್ಟ ಸಂಸಾರಗಳಲ್ಲಿ ಬೆಳೆಯುವ ಮಕ್ಕಳಿಗೆ ಈ ರೀತಿ ಗುಂಪಿನಲ್ಲಿ ಕೆಲಸ ಮಾಡುವುದು ದೊಡ್ಡ ಸವಾಲೇ. ಚಾಡಿ ಹೇಳುವುದು, ಕಿತ್ತುಕೊಳ್ಳುವುದು, ತಾವೊಬ್ಬರೇ ಮಾಡಬೇಕೆಂದು ಬಯಸುವುದು, ಇಲ್ಲವಾದರೆ ಯಾರ ತಂಟೆಯೂ ಬೇಡವೆಂಬಂತೆ ಗುಂಪಿನಿಂದ ಆಚೆ ಉಳಿಯುವುದು ಸಾಧಾರಣವಾಗಿ ಕಂಡು ಬರುವ ದ್ರುಶ್ಯ. ಈ ಮಕ್ಕಳೂ ಅದಕ್ಕೆ ಹೊರತಲ್ಲ.ಇದರ ಮದ್ಯೆಯೇ ಶಿವಕುಮಾರ್ ಅವರು ಆ ಮಕ್ಕಳ ಮನ ಒಲಿಸಿ ತಿದ್ದಿ, ತೀಡಿ ಅಂತೂ ಕೆಲಸ ಪೂರೈಸುವ ಹಾಗೆ ನೋಡಿಕೊಂಡರು. ನಂತರ ಅವರವರ ಜಾಗಗಳನ್ನು ಅವರು ಸ್ವಚ್ಛಗೊಳಿಸುವುದು ಕೂಡ ಮುಖ್ಯವಾದ ವಿಷಯವೇ. ನಂತರ ಮುಖವಾಡಗಳನ್ನು ಒಣಗಿಸಲು ಇಟ್ಟರು. ಒಣಗಿದ ಮೇಲೆ ಮತ್ತೆ ಐದು ಗುಂಪುಗಳಾಗಿ ಕುಳಿತು ತಾವು ಮಾಡಿದ ಬಲೂನುಗಳಿಗೆ ಶಿವಕುಮಾರ್ ಮತ್ತು ಕಿರಣ್ ಅವರು ಹೇಳಿದ ರೀತಿಯಲ್ಲಿ ಗುಂಪಿನ ಎಲ್ಲರೂ ಬೇರೆ ಬೇರೆ ಜಾಗಗಳನ್ನು ಹಂಚಿಕೊಂಡು ಬಣ್ಣ ಹಚ್ಚಿದರು.

ಈಗ ಮುಖವಾಡಗಳು ಸಿದ್ಧ

Advertisements