ಬೆಳಗ್ಗೆ ಒಂಬತ್ತು ಗಂಟೆಯಿಂದಲೇ ಸಂಚಾರಿ ಅಂಗಳಕ್ಕೆ ಬರಲು ಪ್ರಾರಂಭಿಸಿದ ಮಕ್ಕಳು ಹತ್ತು ಮೂವತ್ತರ ಒಳಗೆ ಎಲ್ಲರೂ ಬಂದು ಸೇರಿದರು. “ಆಂಗಿಕಂ ಭುವನಂ ಯಸ್ಯ” ಶ್ಲೋಕದಿಂದ ಪ್ರಾರಂಭವಾದ ಶಿಬಿರದಲ್ಲಿ ಅಜ್ಜನೊಬ್ಬನ ಆಗಮನದಿಂದ ಇಡೀ ತರಗತಿಗೆ ಹೊಸ ಮೆರಗು ಬಂದಿತು. ಆತ ಮಕ್ಕಳಿಗೆ ನಮ್ಮ ದೇಶದ ಸಂಸ್ಕೃತಿ, ಭಾಷೆ, ಪುರಾಣ, ಇತಿಹಾಸ ಎಲ್ಲವನ್ನೂ ನಾವು ಕಾಪಾಡಿಕೊಳ್ಳಬೇಕೆಂದು ಹೇಳುತ್ತಾ ಮಕ್ಕಳಿಗಾಗಿ ಒಂದು ಕಥೆ ಹೇಳಿದರು. ಆ ಕಥೆಯೊಳಗಿನ ರಾಕ್ಷಸ, ರಾಕ್ಷಸಿ, ಹುಡುಗ, ಹುಡುಗಿ ಪಾತ್ರಧಾರಿಗಳೆಲ್ಲರೂ ತರಗತಿಗೆ ನುಗ್ಗುತ್ತಿದ್ದಂತೆಯೇ ಮಕ್ಕಳು ಹೋ!!!! ಎಂದು ಕೂಗುತ್ತಾ, ಹೆದರುತ್ತಾ, ಕಿರುಚುತ್ತಾ, ಗಾಬರಿಯಲ್ಲಿ ಅತ್ತಿಂದಿತ್ತಾ, ಇತ್ತಿಂದಿತ್ತಾ, ಚೆಲ್ಲಾಪಿಲ್ಲಿಯಾದರು. ಕಥೆ ಕೇಳುತ್ತಾ ತಾವೂ ಕಥೆಯೊಳಗೆ ಒಂದಾದರು. ನಂತರ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಅಜ್ಜನೊಡನೆ ಮಾತಿಗಿಳಿದರು. ಮತ್ತೆ ಬಾ ಎಂದರು. ದಿನವೂ ಬಂದು ಕಥೆ ಹೇಳು, ನಾಟಕ ಮಾಡಿಸೆಂದು ಕೇಳಿಕೊಂಡರು. ಸಂತೋಷದಿಂದ ಅಜ್ಜನನ್ನು ಕಳುಹಿಸಿಕೊಟ್ಟರು.

ನಂತರ ಅವರ ತಲೆಯಲ್ಲಿ ಕೆಲಸ ಪ್ರಾರಂಭವಾಯಿತು. ಆ ಅಜ್ಜ ಇಲ್ಲಿಗೇಕೆ ಬಂದರು? ತರಗತಿಗೆ ನುಗ್ಗಿದ ರಾಕ್ಷಸ ಯಾರು? ರಾಕ್ಷಸಿ ಯಾರು? ಎಂಬಂತ ಪ್ರಶ್ನೆಗಳನ್ನು ಕೇಳಿ ಕೇಳಿ ಅವರೇ ಉತ್ತರ ಹುಡುಕಿಕೊಂಡರು.

ನಂತರ ಶಿಬಿರದ ನಿರ್ದೇಶಕರಾದ ಗಣಪ, ಕಿರಣ್, ಶಿವಕುಮಾರ್ ಅವರೊಂದಿಗೆ ಆಟವಾಡಿ ಹಗುರಾದರು.

Advertisements