ಬೇಸಿಗೆ ರಜೆಯಲ್ಲಿ ಮಕ್ಕಳಿಗಾಗಿ ಮಕ್ಕಳ ನಾಟಕೋತ್ಸವ –

ರಂಗಶಂಕರದಲ್ಲಿ ನರಿಗಳಿಗೇಕೆ ಕೋಡಿಲ್ಲ ಮತ್ತು ಪಿನೋಕಿಯೋ

Children Plays1

ಸಂಚಾರಿ ಥಿಯೇಟರ್ ಇದೇ ಮೇ 17, 18 ಮತ್ತು 19 ರಂದು ರಂಗಶಂಕರದಲ್ಲಿ ಮಕ್ಕಳ ನಾಟಕೋತ್ಸವವನ್ನು ಆಯೋಜಿಸಿದೆ. ಈ ಉತ್ಸವದಲ್ಲಿ ಕುವೆಂಪು ಅವರ ಸಣ್ಣ ಕಥೆಯನ್ನಾಧರಿಸಿದ “ನರಿಗಳಿಗೇಕೆ ಕೋಡಿಲ್ಲ?” ಎಂಬ ನಾಟಕವನ್ನು ಮೇ 17 ಮತ್ತು 18 ರಂದು ಸಂಜೆ 7.30 ಗಂಟೆಗೆ ಮತ್ತು ‘ಪಿನೋಕಿಯೋ’ ನಾಟಕವನ್ನು ಮೇ 19 ಮದ್ಯಾಹ್ನ 3.30 ಕ್ಕೆ ಮತ್ತು 7.30 ಕ್ಕೆ ಪ್ರದರ್ಶಿಸುತ್ತದೆ.

“ನರಿಗಳಿಗೇಕೆ ಕೋಡಿಲ್ಲ?” :

ಐವತ್ತೆರಡು ವರುಷಗಳ ಹಿಂದೆ “ಮಕ್ಕಳ ಪುಸ್ತಕ” ಎಂಬ ಹೆಸರಿನಲ್ಲಿ ಹೊರಡುತ್ತಿದ್ದ ಮಾಸಪತ್ರಿಕೆಯಲ್ಲಿ ಪ್ರಕಟವಾದ ಕುವೆಂಪು ಅವರ ಕತೆ ಇದು. ಎಲ್ಲ ಜೀವರಾಶಿಯನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡು ಲಾಲಿಸುವ, ಸಮತೋಲನದಿಂದ ಕಾಪಾಡುವ ಪ್ರಕೃತಿಯೊಳಗೆ ಕಾರುಣ್ಯ ಮತ್ತು ಕಾಠಿಣ್ಯ ಎರಡೂ ಜೊತೆ ಜೊತೆಯಲ್ಲಿಯೇ ಇರುವುದನ್ನು ಹೇಳುತ್ತಲೇ ಕುತಂತ್ರ ಮತ್ತು ಅಹಂಕಾರ ಮಾತ್ರ ಸಲ್ಲದೆಂಬ ಸಣ್ಣ ಸೂಚನೆಯನ್ನು ಈ ಕಥೆ ನೀಡುತ್ತದೆ. ಕೊಲ್ಲುವುದಕ್ಕಿಂತಲೂ ಕಾಯುವುದು ಮುಖ್ಯವೆಂಬುದನ್ನು ಮತ್ತು ನಮ್ಮ ಮೇಲೆ ಸವಾರಿ ಮಾಡುವ ಅಹಂಕಾರವನ್ನು ಮುರಿದು ಎಸೆಯಬೇಕಾಗಿರುವ ಅಗತ್ಯವನ್ನು ಗುಬ್ಬ, ಗುಬ್ಬಿ, ಹುಲಿ ಕರಡಿ, ನರಿ ಮತ್ತು ಗೂಬೆ ಮೂಲಕ ಮನದಟ್ಟು ಮಾಡಿಸುತ್ತಾರೆ.ಈ ಕಥೆಯನ್ನು ಶಾಂತಾ ನಾಗರಾಜ್ ಮತ್ತು ಮಂಗಳಾ.ಎನ್ ರಂಗರೂಪವಾಗಿಸಿದ್ದಾರೆ.ಶಶಿಧರ ಅದಪ ಅವರ ರಂಗವಿನ್ಯಾಸವಿದೆ. ಗಜಾನನ.ಟಿ.ನಾಯ್ಕ ಅವರ ಸಂಗೀತ ನಿರ್ದೇಶನವಿದ್ದು ಎನ್.ಮಂಗಳಾ ಅವರ ನಿರ್ದೇಶನವಿದೆ.

‘ಪಿನೋಕಿಯೋ’:

ಮೂಲ ಕಾರ್ಲೋ ಕಲಾಡಿ ಅವರ ಪಿನೋಕಿಯೋ ಕತೆಯನ್ನು ಪ್ರಹ್ಲಾದರಾವ್ ಅವರು ಕನ್ನಡಕ್ಕೆ ತಂದಿದ್ದಾರೆ. ಅದನ್ನು ಸಂಕ್ಷಿಪ್ತಗೊಳಿಸಿ, ರಂಗರೂಪವಾಗಿಸಿ,ಇವತ್ತಿನ ಮಕ್ಕಳ ಜೊತೆ ಮುಖಾಮುಖಿಯಾಗಿಸುವ ಪ್ರಯತ್ನವನ್ನು ಪಿನೋಕಿಯೋ ನಾಟಕದಲ್ಲಿ ಮಾಡಲಾಗಿದೆ. ಇದರ ರಂಗರೂಪವನ್ನು ಎನ್.ಮಂಗಳಾ ಅವರು ಮಾಡಿದ್ದಾರೆ. ಕಿರಣ್ ಅವರ ರಂಗವಿನ್ಯಾಸವಿದೆ. ಗಜಾನನ.ಟಿ.ನಾಯ್ಕ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ನಾಟಕವನ್ನು ಸಂಚಾರಿ ಥಿಯೇಟರ್ ಕಲಾವಿದರಾದ ಬಿ.ವಿಜಯ್ ನಿರ್ದೇಶನ ಮಾಡಿದ್ದಾರೆ. ಈ ಮೂಲಕ ಸಂಚಾರಿ ಥಿಯೇಟರ್ ಹೊಸ ನಿರ್ದೇಶಕನೊಬ್ಬನನ್ನು ಪರಿಚಯಿಸುತ್ತಿದೆ.

Advertisements