Children Theatre workshop

*ನಾಟಕದೊಳಗೆ ನಮ್ಮ ಪುಟಾಣಿಗಳು!

*ಶಾಂತಾ ನಾಗರಾಜ್ ಅವರಿಂದ ಶುಭ ನುಡಿ ಮತ್ತು ಮಕ್ಕಳಿಗೆ ಸೆರ್ಟಿಫಿಕೇಟ್!

* ರಂಗಾಯಣ ರಘು ಅವರಿಂದ ನಾಟಕದೊಳಗಿನ ರಂಗತಜ್ಞರಿಗೆ ಅಭಿನಂದನೆ!

Photography- Karthik.V.N

G N MohanG N Mohan:

ಚಂದ್ರಕೀರ್ತಿಯ ಬಾಲ:

ಸಂಚಾರಿ ಥಿಯೇಟರ್ ನಲ್ಲಿ ಮಕ್ಕಳ ಕಲರವ.ರಂಗದ ತುಂಬೆಲ್ಲಾ ಚಿಣ್ಣರ ಚಿಲಿಪಿಲಿ.ಚಂದ್ರ ಕೀರ್ತಿ ನಿರ್ದೇಶನದಲ್ಲಿ ಮೂಡಿಬಂದ ‘ಬಾಲವೊಂದಿದ್ದರೆ ?’ನಾಟಕ ಪ್ರದರ್ಶನದಲ್ಲಿ ಮಕ್ಕಳು ತೋರಿದ ಪ್ರತಿಭೆಗೆ ನೆರೆದವರೆಲ್ಲರ ಮುಗಿಲು ಮುಟ್ಟಿದ ಚಪ್ಪಾಳೆ.ಅದ್ಭುತ ಪ್ರದರ್ಶನಕ್ಕೆ ಕಳೆದ ಇಪ್ಪತ್ತು ದಿನಗಳ ಶ್ರಮ ಸಾರ್ಥಕವಾದ ಘಳಿಗೆ.ಪುಟಾಣಿಗಳ ಪ್ರದರ್ಶನದಲ್ಲಿ ನೆರೆದವರೆಲ್ಲರ ಮನಸ್ಸಿಂದ ಕತ್ತರಿಸಿ ಹೋದ ಬಾಲ.

Click the link to view the post-
http://avadhimag.com/?p=87652

Kalpana NaganathKalpana Naganth: Yesterday went to see the show ‘Balavondididre..illa andoryaaru?’ for ‘Sanchari’ troupe’s children theatre workshop. .. Feel proud to see the director Chandrakeerthi, whom some of us have seen him as a child in children’s workshop and now transformed into a director for children’s play.Good work Keerthi and a very good show by children. All the best. God bless you.

Nanditha yadav

Nanditha Yadav:  keerti wat a brilliant act dat was! it was so refreshing inspiring,u n ur kids realy rock!

Mico manjuMico Manju:  Hats off .CK, , , , ,

Guruprasad KasinGuruprasad Kasin:  It was a great show and talented performance by Kids. We all enjoyed a lot and had great time @ Kala soudha. Houdu “‘ಬಾಲವೊಂದಿದ್ದಿದ್ದರೆ…?’ -ಇಲ್ಲಾಂದೋರ್ ಯಾರು!”

Nagesh YadavNagesh Yadav: Outstanding CK !! Outstanding !! lost myself in ur troupe’s act . No wordz 2 praise … Plz gv my wishes to all those ”Maruthis ”… Music, lyrics, choreography, acting , dance, everything superb….

Ramaa RaoRamaa Rao: A well received show to conclude the summer theatre camp.

ಮನುಷ್ಯನ ಮೂಲ ಕೋತಿ ಅಂತ ಗೊತ್ತಾ ತಿಮ್ಮಪ್ಪಾ…

ಶಿವು ಮೋರಿಗೇರಿ

ಒಂದು ದಿಢೀರ್ ಆರ್ಡರ್. ಸಂಜೆ ನೀನು ಹನುಮಂತ ನಗರದಲ್ಲಿರೋ ಕೆ ಹೆಚ್ ಕಲಾಸೌಧದಲ್ಲಿ ಒಂದು ನಾಟಕ ನಡೆಯುತ್ತೆ. ಕರೆಕ್ಟಾಗಿ ಆರು ಘಂಟೆಗಿರಬೇಕು, ಹೋಗು ರೆಡಿಯಾಗು. ಜಿ ಎನ್ ಸಾರ್ ಹೀಗೆ ಹೇಳುತ್ತಿದ್ದರೆ ನಂಗೊಂದು ಸುತ್ತು ಗಿರ್ರಗಿಟ್ಲೆ. ಬೆಂಗಳೂರಿಗೆ ಬಂದು ಎರೆಡು ವರ್ಷಗಳಾಗ್ತಾ ಬಂದ್ರೂ ಬೆಂಗಳೂರಿನ ಕೆಲವೇ ಕೆಲವು ಏರಿಯಾಗಳು ಗೊತ್ತಷ್ಟೆ. ಅಂತಾದ್ರಲ್ಲಿ ಈ ಹನ್ಮಂತ ನಗರಕ್ಕೆ ಹೆಂಗಪ್ಪಾ ಹೋಗೋದು ಅದೂ ಕೊಟ್ಟಿರೋ ಟಾರ್ಗೆಟ್ ಟೈಂನೊಳಗೆ ? ಅಷ್ಟಕ್ಕೂ ಯಾವ ನಾಟಕ, ಯಾವ ತಂಡ, ಏನದರ ಕಥೆ, ಏನೆಂದರೇನೂ ಗೊತ್ತಿಲ್ಲ. ಆದ್ರೂ ನಾನಲ್ಲಿಗೆ ಹೋಗಲೇಬೇಕು. ಸರ್ ಹೇಳಿದಾರೆ ತಾನೆ? ಅದೇನಾದ್ರೂ ಆಗ್ಲಿ ಹೋಗಬೇಕು ಅಷ್ಟೆ. ಅಂತ ಯೋಚಿಸ್ತಾ ಮತ್ತೊಮ್ಮೆ ಅಡ್ರೆಸ್ ಪಕ್ಕಾ ಮಾಡಿಕೊಂಡು ಹೆಂಗೋ ಪೇಚಾಡಿಕೊಂಡು ಕೊನೆಗೂ ಹನುಮಂತನಗರದ ರಾಮಾಂಜನೆಯ ದೇವಸ್ಥಾನದ ಹತ್ತಿರದ ಕೆ ಹೆಚ್ ಕಲಾಸೌಧದ ಹತ್ತಿರ ಹೋಗುತ್ತಿರುವಂತೆಯೇ ಅಲ್ಲೆಲ್ಲಾ ರಂಗಪ್ರಿಯರ ಗುಂಪಿತ್ತು. ಸದ್ಯ ಇನ್ನೂ ನಾಟಕ ಪ್ರದರ್ಶನ ಶುರು ಆಗಿಲ್ಲ ಪುಣ್ಯ ಅಂದುಕೊಂಡು ಟಿಕೆಟ್ ಖರೀದಿಸಿದಾಗಲೂ ನಂಗೆ ನಾಟಕ ನಡೆಯೋ ಸಂಚಾರಿ ಥೇಟರ್ ಬಾಗಿಲೂ ಗೊತ್ತಿಲ್ಲ. ಪಕ್ಕದಲ್ಲಿರೋರನ್ನ ವಿಚಾರಿಸಿ ಇನ್ನೂ ಸಮಯವಿದೆ ಎಂಬುದನ್ನು ಖಾತ್ರಿಸಿಕೊಂಡು ಥೇಟರ್ ನ ಪ್ರಾರಾಂಗಣದಲ್ಲಿನ ಕೆಲವು ಬೋರ್ಡ್ ಗಳನ್ನು ಗಮನಿಸಿದೆ.

ಅಲ್ಲಿನ ಮಕ್ಕಳು ತಮ್ಮ ಪ್ರತಿಭೆಯ ಸ್ಯಾಂಪಲ್ ಗಳ ಕಿರುಪರಿಚಯಗಳನ್ನು ಚಿತ್ರಗಳ ಮೂಲಕ, ಬರವಣಿಗೆಗಳ ಮೂಲಕ, ಹಂಚಿಕೊಂಡಿದ್ದರು, ಅದರಲ್ಲಿ ಯಾವುದೋ ಮಗುವೊಂದು ಬರೆದ ಕಥೆಯನ್ನು ಓದಿ ಕ್ಷಣ ಸ್ಥಬ್ದನಾದೆ. ಅರೆ ! ಈ ಕ್ಷಣದವರೆಗೂ ಇಂಥಹದ್ದೊಂದು ಮುಗ್ದ ಭಾವನೆ, ಸರಳತೆಯಲ್ಲಿ ಬೆರಗುಗೊಳಿಸುವ ಕಲ್ಪನೆ ನನಗ್ಯಾಕೆ ಬರಲಿಲ್ಲ ? ನನ್ನ ಸ್ಮೃತಿ ಎಚ್ಚರಗೊಂಡಂದಿನಿಂದ ನೋಡುತ್ತಾ ಬಂದಿರೋ ಒಂದು ಟೊಮ್ಯಾಟೋ, ಒಂದು ಗುಂಡುಪಿನ್ನು, ಐಸ್ ಕ್ರೀಂ, ಮತ್ತೊಂದು ಈರುಳ್ಳಿ ಇಂಥಹ ವಸ್ತುಗಳಿಗೆ ಮಿಡಿತ ತುಂಬಿ ಮಿಡತೆಯಂತೆ ಹಾರಾಡಿಸಬಲ್ಲ ಕಥೆಯೊಂದನ್ನು ಕಟ್ಟಲು ನಂಗ್ಯಾಕೆ ಬರಲಿಲ್ಲ? ಎಂದು ಯೋಚಿಸುತ್ತಲೇ ಯಾಕೆ ನಂಗದು ಒಲಿಯಲಿಲ್ಲ ಎಂದರೆ ನಾನು ಇದುವರೆಗೂ ಸುತ್ತಲಿನ ಸಮಾಜವನ್ನು ಮುಗ್ಧ ವಾಸ್ತವಿಕತೆಯಿಂದ ಗಮನಿಸಿಯೇ ಇಲ್ಲ. ನಾ ಕಂಡ ಎಲ್ಲದರಲ್ಲಿಯೂ ನಾನು ನನ್ನನ್ನು ಹುಡುಕಲು ಪ್ರಯತ್ನಿಸಿದ್ದೇನೆ. ಹಾಗಾಗಿ ನಂಗೆ ಅಂಥಹ ಅದ್ಭುತ ಅವಕಾಶವಂಚಿತನಾಗಿದ್ದೇನೆ ಎಂಬುದನ್ನು ಕಂಡುಕೊಂಡೆ. ಅಸಲಿಗೆ ಕಥೆ ಏನೆಂದರೆ ಟೊಮ್ಯಾಟೋ, ಗುಂಡ್ ಪಿನ್, ಐಸ್ ಕ್ರೀಂ, ಮತ್ತು ಈರುಳ್ಳಿಗಳು ಸಿನೆಮಾ ನೋಡಿಕೊಂಡು ಹೊಳೆಯಲ್ಲಿ ಈಜಾಡುವ ಯೋಜನೆಯಂತೆ ಮೊದಲು ಸಿನೆಮಾ ನೋಡಲು ಹೋಗಿ ಕುಳಿತಾಗ ಒಬ್ಬ ಬಂದು ಟೊಮ್ಯಾಟೋ ಮೇಲೆ ಕುಳಿತುಕೊಳ್ಳೂತ್ತಾನೆ. ಅದಲ್ಲಿ ಸಾಯುತ್ತೆ. ಅದರ ಬೆನ್ನ ಹಿಂದೆಯೇ ಮತ್ತೊಬ್ಬ ದಡೂತಿ ಬಂದು ಗುಂಡ್ ಪಿನ್ ಮೇಲೆ ಕುಳಿತುಕೊಳ್ಳುತ್ತಾನೆ ಗುಂಡ್ ಪಿನ್ ಮುರಿಯುತ್ತೆ ಅಲ್ಲಿಗೆ ಅದೂ ಸಾಯುತ್ತೆ.

ಅವೆರಡರ ಸಾವಿಗೆ ಐಸ್ ಕ್ರೀಂ ಮತ್ತು ಈರುಳ್ಳಿ ಕಣ್ಣೀರು ಸುರಿಸುತ್ತಾ ಹೊಳೆಗೆ ಬಂದು ಈಜಾಡುವಾಗ ಐಸ್ ಕ್ರೀಂ ಕರಗುತ್ತೆ ಅಲ್ಲಿಗದರ ಮರಣ. ಹೀಗೆ ಒಂದೇ ಏಟಿಗೆ ತನ್ನ ಎಲ್ಲಾ ಸ್ನೇಹಿತರನ್ನು ಕಳೆದುಕೊಂಡು ಕಣ್ಣೀರಿಡುತ್ತಾ ಈರುಳ್ಳಿ ಮರಳಿ ರಸ್ತೆಯಲ್ಲಿ ನಡೆದು ಹೋಗುವಾಗ, ಬೀದಿ ಬದಿಯ ಬೇಲ್ ಪುರಿಯವನು ನೋಡಿ ಅದನ್ನು ಕರೆದು ಕೊಲ್ಲಲು ಮುಂದಾದಾಗ ‘ಐಯ್ಯೋ ನಾನು ನನ್ನೆಲ್ಲಾ ಸ್ನೇಹಿತರ ಸಾವಿಗೂ ಕಣ್ಣೀರು ಸುರಿಸಿದೆ ಈಗ ನನ್ನ ಸಾವಿಗೆ ಹನಿ ಕಣ್ಣೀರು ಸುರಿಸೋರೂ ಇಲ್ಲದಂತಾಯ್ತಲ್ಲ’ ಎಂದು ಮರುಗುತ್ತೆ. ಅಷ್ಟರಲ್ಲಿ ಬೇಲ್ ಪುರಿಯವನು ತನ್ನ ಪಕ್ಕದ ಇನ್ನೊಂದು ಈರುಳ್ಳಿಯನ್ನು ಕುಯ್ಯುತ್ತಾ ಕಣ್ಣೀರು ಸುರಿಸುವುದನ್ನು ನೋಡಿದಾಗ ‘ಅರೆ ನನ್ನ ಮರಣಕ್ಕೆ ಮುಂದಾಗುವವನೇ ನಮಗಾಗಿ ಕಂಬನಿಸುವನೇ? ನನ್ನ ಸಾವೆಂಥಾ ಸಾರ್ಥಕ!’ ಎಂದು ಈರುಳ್ಳಿ ತೃಪ್ತಿಗೊಳ್ಳುತ್ತೆ. ಹೀಗೆ ನಿರ್ಜೀವಗಳಿಗೆ ಭಾವ ತುಂಬೋದು ಮಗು ಮನಸ್ಸಿಗೆಷ್ಟು ಸಲೀಸು. ಎಂದುಕೊಳ್ಳುತ್ತಲೇ ನಾಟಕ ಪ್ರದರ್ಶನದ ಸಂಚಾರಿ ಥೇಟರ್ ಬಾಗಿಲು ತೆರೆಯಿತು. ಎಲ್ಲರಂತೆ ನಾನೂ ಒಳ ಹೋಗಿ ಎಲ್ಲಪ್ಪಾ ಕೂರೋದು? ಎಂದು ಯೋಚಿಸುತ್ತಲೇ ನನ್ನ ಹಿಂದೆಯೇ ಬಂದ ಜಿ ಎನ್ ಸಾರ್ ‘ಹೋಗಪ್ಪಾ ಎಲ್ಲಾದ್ರೂ ಕೂತ್ಕೋ ಹೋಗು’ ಎಂದಾಗ ನಂಗೂ ಆಶ್ಚರ್ಯ ತೆಪ್ಪಗೆ ಹೋಗಿ ಮೂಲೆಯೊಂದರಲ್ಲಿ ಕುಳಿತ ಕೆಲ ನಿಮಿಷಗಳಲ್ಲಿ ವೇದಿಯಲ್ಲಿ ಬೆಳಕು.

ಮೊದಲು ವೇದಿಕೆಗೆ ಬಂದದ್ದು ಮಂಗಳಾ ಮೇಡಂ. ಹಾಗೆ ಬಂದವರೇ ಪ್ರದರ್ಶನಕ್ಕೆ ನೆರೆದವರನ್ನೆಲ್ಲಾ ಸ್ವಾಗತಿಸಿ ಸಂಚಾರಿ ಥೇಟರಿನ ಈ ಬಾರಿಯ ಶಿಬಿರಕ್ಕೆ ಮಕ್ಕಳನ್ನು ಕಳುಹಿಸಿದ ಪೋಷಕರಿಗೆ ಧನ್ಯವಾದ ತಿಳಸಿದಾಗಲೇ ನಂಗೆ ಗೊತ್ತಾದದ್ದು, ಈಗ ನಾನು ನೋಡುತ್ತಲಿರೋದು, ಪಳಗಿದ ಕಲಾವಿದರ ಕೈಚಳವನ್ನಲ್ಲ, ಬದಲಾಗಿ ಕೇವಲ ಇಪ್ಪತ್ತು ದಿನ ಶಿಬಿರದಲ್ಲಿ ಪಾಲ್ಗೊಂಡ ಮುದ್ದು ಮುದ್ದು ಮುಗ್ದರೊಳಗಿನ ಅದ್ಭುತ ಕಲೆಯನ್ನು ಎಂಬುದು. ನಾನು ಹೀಗಂದುಕೊಳ್ಳುತ್ತಿರುವಾಗಲೇ ಮಂಗಳಾ ಮೇಡಂ ‘ವೀಕ್ಷಕರೇ ಕಳೆದ ಇಪ್ಪತ್ತು ದಿನಗಳಿಂದ ನಿಮ್ಮ, ನಮ್ಮ ಮಕ್ಕಳು ಏನು ಕಲಿತಿದ್ದಾರೆ ಅನ್ನೋದು ಗೊತ್ತಾಗಬೇಡವೇ? ಬನ್ನಿ, ಆ ಪುಟ್ಟ ಮಕ್ಕಳು ಕಳೆದ 20 ದಿನಗಳಿಂದ ಕಲಿತ,ಸಂಚಾರಿ ಥೇಟರ್ ನ ಅಂಗಳದಲ್ಲಿ ಏನೆಲ್ಲಾ ಸಂಚಲನ ಮೂಡಿಸಿದ್ದಾರೆ ಎಂಬುದನ್ನು ನೀವೇ ನೋಡಿ’ ಎಂದು ಎಂದು ತೆರೆಯಿಂದ ಮರೆಯಾಗುತ್ತಲೇ ವೇದಿಕೆಯ ತೆರೆಯ ಮೇಲೆ ಮೂಡಿದ್ದು, ಗುಂಪು ಗುಂಪು ನಕ್ಷತ್ರಗಳು, ಕಳೆದ ಇಪ್ಪತ್ತು ದಿನಗಳಿಂದ ಕಲಿತ, ತಮ್ಮೊಳಗೆ ಅವಿತ, ಅದ್ಭುತ ಪ್ರತಿಭೆಗಳನ್ನು ಹೊರ ಚೆಲ್ಲಿದ ಅಮೋಘ ಘಳಿಗೆಳನ್ನೊತ್ತ ಸಾಕ್ಷ್ಯ ಚಿತ್ರ.

ಸಂಚಾರಿ ಥೇಟರ್ ನ ಅಂಗಳದಲ್ಲಿ ಆ ಪುಟ್ಟ ತಾರೆಯರು, ಲಯ, ತಾಳ, ರಾಗಗಳ ಹಿಡಿತದ ಮೇಲೆ ತಮ್ಮ ಧ್ವನಿ ಸವಾರಿ ಮಾಡಿಸುವ ಕಲೆ ಕಲಿತಿದ್ದಾರೆ. ನೃತ್ಯ ಎಂದರೆ ವೃಥಾ ಮೈ ಕೈ ಮಿಸುಕಾಟವಲ್ಲ, ಅದು ತಾಳ ಮೇಳಕ್ಕೆ ತಕ್ಕಂತೆ ದೇಹ ದಂಡಿಸಿ , ಬಾಗಿಸಿ ಕರಗತ ಮಾಡಿಕೊಳ್ಳೋದು ಎಂಬುದನ್ನು ಕಲಿತು, ನೃತ್ಯವನ್ನು ತಮ್ಮಲ್ಲಿ ಕಟ್ಟಿ ಹಾಕಿಕೊಂಡಿದ್ದಾರೆ.ಯೋಗ ಧ್ಯಾನಗಳ ಮೂಲಕ ಆ ಮುಗ್ಧ ಹೃದಯಗಳಲ್ಲಿ ಪ್ರಶಾಂತ ಬೆಳಗೋ ಜ್ಯೋತಿ ಕಂಡಿದ್ದಾರೆ. ಆಧುನಿಕ ಒತ್ತಡದ ಜೀವನದ ನಡುವೆ ಕಳೆದು ಹೋದ ಪಂಚೇಂದ್ರಿಯಗಳಿಗೆ ಮತ್ತೆ ಜೀವ ತುಂಬಿಕೊಂಡಿದ್ದಾರೆ. ಶಿಬಿರದ ಇಪ್ಪತ್ತು ದಿನಗಳ ಕಾಲದಲ್ಲಿ ರಂಗದ ಹಲವಾರು ಸೂಕ್ಷ್ಮತೆಗಳನ್ನು, ನಟನೆಯ ಲಗಾಮನ್ನು, ವೇದಿಕೆಯಲ್ಲಿ ತಮ್ಮೊಳಗಿನ ಪ್ರತಿಭೆಯನ್ನು ಅನಾವರಣಗೊಳಿಸುವ ಪಟ್ಟನ್ನು ನಟರಾದ ಕಾಶಿ, ರಂಗಾಯಣ ರಘುರಂಥಹ ಹಿರಿಯ ಕಲಾವಿದರಿಂದ ದಕ್ಕಿಸಿಕೊಂಡಿದ್ದಾರೆ. ಖುದ್ದು ತಾವೇ ಮುಖವಾಡಗಳನ್ನು ತಯಾರಿಸಿದ್ದಾರೆ. ಬಣ್ಣ ಬಣ್ಣದ ಹಾಳೆಗಳಲ್ಲಿ ಎಂದೂ ಬಾಡದ ನಗುಮೊಗದ ಹೂಗಳನ್ನು ಸೃಷ್ಠಿಸಿದ್ದಾರೆ. ಅಷ್ಟೂ ಬಣ್ಣಗಳನ್ನು ಬಳಸಿಕೊಂಡು ತಮ್ಮ ಮನದೊಳಗೆ ಮೂಡಿದ ಚಿತ್ರಗಳನ್ನು, ತಲೆಗೆ ತಲುಪಿದ ಕಲ್ಪನೆಗಳನ್ನು, ಹಾಳೆಗಳಲ್ಲಿ ಚಿತ್ರಕ್ಕಿಳಿಸಿ, ಕಿಸಿ ನಕ್ಕ ರೇಖೆಗಳಿಗೆ ಬಣ್ಣ ತುಂಬಿದ್ದಾರೆ.

ಮೇಕಪ್ ಎನ್ನೋ ಮಾಯಾ ಜಾಲದ ಒಳಹೊಕ್ಕು ಬಂದಿದ್ದಾರೆ. ಸ್ವತಹ ತಾವೇ ಮೇಕಪ್ ತೊಟ್ಟು ಅದರ ಮಹತ್ವ ಕಂಡಿದ್ದಾರೆ. ಪ್ರತಿದಿನ ಸಂಚಾರಿ ಥೇಟರ್ ನಲ್ಲಿ ನಡೆದ ಘಟನಾವಳಿಗಳನ್ನು ಒಂದು ಅಣಕು ಮಾಧ್ಯಮವನ್ನು ಸೃಷ್ಟಿಸಿಕೊಂಡು ಎಲೆಕ್ಟ್ರಾನಿಕ್ ಮಾಧ್ಯಮ ಲೋಕಕ್ಕೊಂದು ಅಡಿಯಿಟ್ಟಿದ್ದಾರೆ. ಹಾಡಿ ಹಗುರಾಗಿದ್ದಾರೆ. ಕುಣಿದು ಕುಪ್ಪಳಿಸಿದ್ದಾರೆ.ಮಸಾಲ್ದೋಸಾ ಶಮಾ, ಚಪಾತಿ ಚಿನ್ಮಯಿ, ಹಲ್ವ ಹನ್ಸಿಕಾ, ಚೌ ಚೌ ಬಾತ್ ಚಂದನ್, ಹೀಗೆ ಸಾಲು ಸಾಲು ಮಕ್ಕಳು ತಮ್ಮ ಪರಿಚಯ ಮಾಡಿಕೊಳ್ಳೂತ್ತಿದ್ದರೆ ಎಂಥಹಾ ವೇದಿಕೆಯೂ ರಂಗೇರದಿರಲು ಹೇಗೆ ಸಾಧ್ಯ ? ಆ ಸಾಕ್ಷ್ಯಚಿತ್ರ ನುಡಿದ ಸಾಕ್ಷ್ಯದಲ್ಲಿ ನೆರೆದವರೆಲ್ಲಾ ವಯೋಮಿತಿ ಮರೆತು ಬಾಲ್ಯಕ್ಕೆ ಜಾರಿದ್ದರೆ ತಪ್ಪೇನಿಲ್ಲ. ಸಾಕ್ಷ್ಯ ಚಿತ್ರ ಪೂರ್ಣಗೊಳ್ಳುತ್ತಿದ್ದಂತೆ ಸಭಿಕರ ಕರತಾಡನದ ಚಪ್ಪಾಳೆ. ಆಗ ಮತ್ತೆ ವೇದಿಕೆಗೆ ಬಂದ ಮಂಗಳಾ ಮೇಡಂ, ‘ನಾಟಕ ಪ್ರದರ್ಶನಕ್ಕೆ ಕ್ಷಣಗಣನೆ ನಡುವೆ ವೇದಿಕೆಗೆ ನಾವು ಶಾಂತಾ ನಾಗರಾಜ್ ರನ್ನು ಬರಮಾಡಿಕೊಳ್ಳೋಣವೆಂದಾಗ ವೇದಿಕೆಗೆ ಬಂದದ್ದು ಹಿರಿಯ ಚೇತನ ಶಾಂತಾ ನಾಗರಾಜ್ ಮೇಡಂ.

ಶಾಂತಾ ನಾಗರಾಜ್ ಮೇಡಂ, ಮೂಲತಃ ಲೇಖಕಿ, ನಟಿ, ಎಲ್ಲಕ್ಕಿಂತ ಮಿಗಿಲಾಗಿ ಕೌನ್ಸಲಿಂಗ್ ಕ್ಷೇತ್ರದಲ್ಲಿ ಬರೊಬ್ಬರಿ ಹದಿನಾರು ವರ್ಷ ಸೇವೆ ಸಲ್ಲಿಸಿದ್ದಾರೆ. 1990 ರಿಂದ ಪ್ರತಿವರ್ಷ ನೂರರಿಂದ ನೂರ ಮುವತ್ತು ಮಕ್ಕಳೊಟ್ಟಿಗೆ ವರ್ಕ್ ಶಾಪ್ ನಡೆಸಿದ್ದಾರೆ. ಇಡೀ ಕರ್ನಾಟಕದಲ್ಲಿಯೇ ಮೊಟ್ಟ ಮೊದಲ ಬಾರಿಗೆ ರೆಸಿಡೆನ್ಸಿಯಲ್ ವರ್ಕ್ ಶಾಪ್ ನಡೆಸಿದ ಹೆಗ್ಗಳಿಕೆ ಇವರದ್ದು, ಎಂದು ಅವರ ವಿವರ ಕೇಳುತ್ತಿದ್ದರೆ ಎಂಥಹ ನಿಸ್ತೇಜ ಮುಖದಲ್ಲೂ ಅಭಿಮಾನ ಉಕ್ಕುತ್ತೆ. ಹೆಮ್ಮೆ ಎನ್ನಿಸುತ್ತೆ. ಅವರ ಜೀವನೋತ್ಸಾಹ ಕಂಡು ಎಂಥಹವರ ಎದೆಯಲ್ಲೂ ಚೈತನ್ಯ ಚಿಮ್ಮುತ್ತೆ. ಇಂಥಹ ಶಾಂತಾ ನಾಗರಾಜ್ ಮೇಡಂಗೆ, ಕಲ್ಪನಾ ನಾಗರಾಜ್ ಸನ್ಮಾನಿಸಿದ ಮೇಲೆ ಮಾತಿಗಿಳಿದ ಮೇಡಂ, ಇಂದಿನ ಶರವೇಗದ ಬದುಕಲ್ಲಿ ಮಕ್ಕಳೂ ಸಹ ತಮ್ಮ ಬಾಲ್ಯವನ್ನು ಅನುಭವಿಸಲಿಕ್ಕಾಗುತ್ತಿಲ್ಲ. ನಮ್ಮ ವ್ಯವಸ್ಥೆ ನೀಡುತ್ತಿರುವ ಶಿಕ್ಷಣ ಕೇವಲ ಎಡಭಾಗದ ಮೆದುಳಿಗೆ ಮಾತ್ರ ಸಿಕ್ಕಿದೆ. ಕೇವಲ ಅಂಕಪಟ್ಟಿಗೆ ಅಭಿವ್ಯಕ್ತಿ ಮೊಟುಕುಗೊಳ್ಳುತ್ತಿದೆ. ಆದರೆ ಬಲ ಭಾಗದ ಭಾವೋದ್ವೇಗ, ಪ್ರತಿಭೆ, ಇತರೆ ಅಭಿವ್ಯಕ್ತಿ ಶಿಕ್ಷಣ ಸಿಗ್ತಾಯಿಲ್ಲ. ಮಕ್ಕಳು ಶಾಲೆ ಬಿಟ್ಟ ತಕ್ಷಣ ಹೋ ಎಂದು ಬರುವುದನ್ನೊಮ್ಮೆ ಅವಲೋಕಿಸಿದರೂ ಸಾಕು ತರಗತಿಯಲ್ಲಿನ ಕಟ್ಟುನಿಟ್ಟಿನ ಶಿಸ್ತು ಗೊತ್ತಾಗುತ್ತೆ. ಆದರೆ ಸಂಚಾರಿ ಥೇಟರ್ ಶಿಬಿರದಲ್ಲಿ ಹಾಗಲ್ಲ. ಇಲ್ಲಿ ಮಕ್ಕಳು ತಮ್ಮ ಬಾಲ್ಯವನ್ನು ಮರಳಿ ಪಡೆಯುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಪಂಚೇಂದ್ರಿಯಗಳಿಗೆ ಮರಳಿ ಜೀವ ತುಂಬಿಕೊಳ್ಳುತ್ತಾರೆ.

ಶಾಲೆಯ ತರಗತಿಗಳಲ್ಲಿ ‘ಶ್! ಸುಮ್ಮನೆ ಕೂಡು’ ಎಂದು ಗದರಿದರೆ, ಇಲ್ಲಿ ‘ಹಾಡು ಮಗಾ ನಿನ್ನ ದ್ವನಿಯ ಕೊನೆಯನ್ನು ತಲುಪು’ ಎಂದು ಅವರ ಧ್ವನಿಗೆ ಜೀವ ತುಂಬುತ್ತೇವೆ. ಶಾಲೆಯ ತರಗತಿಗಳಲ್ಲಿ ‘ಹೇ ಪಕ್ಕದಲ್ಲಿರೋರಿಗೆ ಡಿಸ್ಟರ್ಬ್ ಮಾಡ್ಬೇಡ ಕರೆಕ್ಟಾಗಿ ಸ್ಟ್ರೇಟಾಗಿ ಕೂತ್ಕೋ’ ಅಂದ್ರೆ, ಇಲ್ಲಿ ‘ಬಾ ಮಗಾ ಕುಣಿ ನೀನು, ನಿನ್ನ ಹುಮ್ಮಸ್ಸೆಲ್ಲಾ ಹುಸ್ಸಪ್ಪಾ ಅನ್ನುವವರೆಗೂ ಕುಡಿದುಬಿಡೆಂದು’ ಅವರೊಳಗಿನ ನೃತ್ಯ ಪ್ರತಿಭೆಯನ್ನು ಆಚೆ ತೆಗೀತೀವಿ. ಇದುವರೆಗೂ ಇಲ್ಲಿನ ಶಿಬಿರಗಳಲ್ಲಿ ಪಾಲ್ಗೊಂಡವರೆಲ್ಲಾ ಇಂದು ವಿದೇಶಗಳಲ್ಲಿ ಉತ್ತಮ ಹಂತದ ವೃತ್ತಿಯಲ್ಲಿ ನೆಮ್ಮದಿಯಾಗಿ ಜೀವಿಸುತ್ತಿದ್ದಾರೆ. ಅಂಥಹವರಿಗೆ ಅಲ್ಲಿ ನಿಮ್ಮ ಬಾಲ್ಯವನ್ನೊಮ್ಮೆ ಸ್ಮರಿಸಿಕೊಳ್ಳಿ ಎಂದು ಹೇಳಿದರೆ ಹಿಗ್ಗಿಲೆ ಸ್ಮರಿಸಿಕೊಳ್ಳುತ್ತೇವೆ ಎಂಬ ತಮ್ಮ ಹರ್ಷವನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ ಎಂಬುದನ್ನು ನೆನೆದರು. ನಮ್ಮ ಬಾಲ್ಯದಲ್ಲಿ ನೀವು ನಮಗೆ ಆಶ್ರಯ ನೀಡಿದ್ದಿರಿ ಬನ್ನಿ ಈಗ ನಮ್ಮೊಡನೆ ಕೆಲ ನೆಮ್ಮದಿ ಕ್ಷಣಗಳನ್ನು ಕಳೆಯಿರೆಂದು ಅವರು ನಮ್ಮ ಕುಟುಂಬವನ್ನು ಅಲ್ಲಿಗೆ ಕರೆಸಿಕೊಂಡು ಸತ್ಕರಿಸಿ ಕಳಿಸಿದ್ದಾರೆ’ ಎಂದು ನೆನೆದಾಗ, ಸಾರ್ಥಕ ಜೀವನಕ್ಕೆ ಇನ್ನೇನು ಬೇಕು ? ಎನ್ನಿಸದಿರದು. ಹೀಗೆ ಹಿರಿಯರು ಮಾತುಗಳನ್ನು ಮುಗಿಸಿ ವೇದಿಕೆಗೆ ವಂದಿಸಿ ವೇದಿಕೆಯಿಂದ ಮರಳಿದಾಗ, ವೇದಿಕೆಯಲ್ಲಿದ್ದ ಮಂಗಳಾ ಮೇಡಂ, ಇನ್ನೇನು ನಾಟಕ ಪ್ರದರ್ಶನಗೊಳ್ಳುತ್ತೆ. ಈ ನಾಟಕದ ವಿಶೇಷವೆಂದರೆ ನಮ್ಮ ಸಂಚಾರಿ ಥೇಟರ್ ನಲ್ಲಿಯೇ ಬಾಲ ನಟನಾಗಿ ಶಿಬಿರಗಳಲ್ಲಿ ಸದಾ ಪಾಲ್ಗೊಳ್ಳುತ್ತಾ ಬಂದ ಮುದ್ದು ಬಾಲಕ, ಇಂದು ದೊಡ್ಡವನಾಗಿ ತಾನೊಂದು ನಾಟಕ ನಿರ್ದೇಶಿಸುವ ಹಂತಕ್ಕೇರಿದ್ದಾನೆ.

ಅಂಥಹ ಸಂಚಾರಿ ಥೇಟರ್ ನ ಹುಡುಗ ಚಂದ್ರಕೀರ್ತಿ ನಿರ್ದೇಶನದ ಮಕ್ಕಳ ನಾಟಕ ‘ಬಾಲವೊಂದಿದ್ದಿದ್ದರೆ’ ಪ್ರಯೋಗ ಎಂದು ಹೇಳುತ್ತಲೇ, ‘ಬೆಳದ ಮೇಲೆ ಅಪ್ಪನ ನಂತರ ಮಗನೊಬ್ಬ ತನ್ನದೇ ಮನೆಯ ಯಜಮಾನನಾದಷ್ಟು ಸುಲಭವಲ್ಲ ಈ ಬೆಳವಣಿಗೆ, ಶಿಬಿರಗಳಲ್ಲಿ ಬಾಲನಟನಾಗಿ ಬಂದು ಅದೇ ವೇದಿಕೆಯಲ್ಲಿ ತಾನೊಂದು ನಾಟಕ ನಿರ್ದೇಶನ ಮಾಡುವುದೆಂದರೆ ತಮಾಷೆಯ ಮಾತಾಯಿತಾ? ಎಂದುಕೊಳ್ಳುತ್ತಲೇ ವೇದಿಕೆಯಲ್ಲಿ ಕಪ್ಪು ದಿರಿಸಿನ ವಾನರ ವೇಶಾಧಾರಿಗಳ ಪುಟ್ಟ ಪುಟ್ಟ ಮಕ್ಕಳ ದಂಡು ಬಂದು ‘ಶರಣು ಹೇಳಿವಿ ಸ್ವಾಮಿ ನಾವು ನಿಮಗಾ… ಸದ್ದು ಗದ್ದಲಾ…. ಹೊಯ್,, ಸದ್ದು ಗದ್ದಲಾ ಮಾಡಬ್ಯಾಡ್ರಿ ಆಟದೊಳಗಾ… ಅಂತ ನಾಟಕ ಪ್ರದರ್ಶನವನ್ನು ಹಾಡಿನೊಂದಿಗೆ ಶುರುವಿಟ್ಟೇಬಿಟ್ಟರು. ಎಷ್ಟೊಂದು ಕಪಿ ವೇಷಾಧಾರಿಗಳು, ಸಾಕ್ಷಾತ್ ವಾನರಾವತಾರ. ಹಾಡಿನ ನಂತರ ವೇದಿಕೆಮೇಲೆ ನಾಲ್ಕಾರು ಕಟ್ಟಡಗಳ ಚಿತ್ರಣವನ್ನೊದ್ದ ಪಾತ್ರಗಳು. ಅದರಲ್ಲೊಂದದು ಪಾತ್ರಕ್ಕೆ ಕೋತಿ ಅಂದಿದ್ದಕ್ಕೆ ಬೇಸರ ವ್ಯಕ್ತಪಡಿಸುತ್ತಾ ನಾವು ನಾವು ಕೋತಿ ಥರಾನೇ ಇರಬೇಕು ಅನ್ಸುತ್ತೆ ಆದ್ರೆ ಇಲ್ಲಿ ನಾವು ಕೋತಿಗಳಾದ್ರೆ ಹಾರೊಕ್ಕೆ ಮರಗಳೇ ಇಲ್ಲ, ಬರೀ ಬಿಲ್ಡಿಂಗ್ ಗಳು. ಇಲ್ಲಿ ನಾವು ಬಿಲ್ಡಿಂಗ್ ನಿಂದ ಬಿಲ್ಡಿಂಗ್ ಗೆ ಹಾರಬೇಕಷ್ಟೆ.

ಇಲ್ಲೇ ಹತ್ತಿರದಲ್ಲೆ ಕಿಷ್ಕಿಂದೆಯಲ್ಲಿ ತುಂಬಾ ಮರಗಳಿವೆಯಂತೆ ಅಲ್ಲಿಗೆ ಹೋಗೋಣ ಎಂದಾಗ ಅರೆ! ನಮ್ಮ ಹಂಪಿ ಹತ್ರದ ಕಿಷ್ಕಿಂದೆ?ಅಂತ ಮೈ ಝುಂ ಅಂತು. ಪ್ರದರ್ಶನ ನೋಡುವ ಹುಮಸ್ಸು ಜಾಸ್ತಿಯಾಯ್ತು. ತಕ್ಷಣ ವೇದಿಕೆಯಲ್ಲಿ ಸಂಗೀತದ ಅಲೆ… ಕೋತಿ ಅಂದ್ರೆ ತಮಾಷೆಯಲ್ಲ, ಮನುಷ್ಯನ ಮೂಲ ಕೋತಿ ಅಂತ ಗೊತ್ತಾ ತಿಮ್ಮಪ್ಪಾ… ಅಪ್ಪ ಗೊತ್ತಾ ತಿಮ್ಮಪ್ಪಾ.. ನಮ್ ತಾತನ್ ತಾತನ್ ತಾತನ್ ತಾತ ಕೋತಿ ಅಂತಪ್ಪಾ… ಹೋ,,, ಅಂತ ದೊಡ್ಡ ಕಪಿ ಗುಂಪೊಂದು. ಹರ್ಷಿಸುತ್ತೆ. ನಂತರ ಈಗ ಸಂಚಾರಿ ಪ್ರದರ್ಶನ ಕಿಕ್ಷಿಂದೆಗೆ ಪ್ರಯಾಣ ಅಂತ ಹಿನ್ನೆಲೆ ಧ್ವನಿ ಕೇಳುತ್ತಲೇರ ವೇದಿಕೆಯಲ್ಲಿ ಚುಕು ಬುಕು, ಚುಕುಬುಕು ರೈಲೇ,,, ಹಳಿಗಳ ಮೇಲೇ ಓಡೇ.. ಬೆಟ್ಟಗುಡ್ಡ, ಕಾಡು ಕಣಿವೆ ,ಹಿಂದಕೆ ಹಿಂದಕೆ ದೂಡಿ, ಸೇತುವೆ ಗೀತುವೆ ದಾಟಿ, ದೂರದ ಕಿಷ್ಕಿಂದೆ ಸೇರಿ…. ಅಂತ ಪುಟ್ಟ ಮಕ್ಕಳು ಬೋಗಿಯಾಕಾರದ ಡಬ್ಬಗಳನ್ನು ನೇತು ಹಾಕಿಕೊಂಡು ವೇದಿಕೆಯಲ್ಲೊಂದು ಸುತ್ತು ಬಂದ್ಹೋದರೆ, ನಾವು ಸಾಕ್ಷಾತ್ ಆ ರೈಲಿನೊಳಗಿನ ಪ್ರಯಾಣಿಕರು.

ಕಿಕ್ಷಿಂದೆಯ ರಮ್ಯತೆಯಲ್ಲಿ ಮತ್ತೆ ಸೇರುತ್ತೆ ದೊಡ್ಡ ಕಪಿ ಪಡೆ. ಸಂತೋಷವಾಗಿ ನೆಗೆದಾಡುತ್ತಿರುವಾಗಲೇ ವೇದಿಕೆಗೆ ಛಂಗನೆ ಹಾರಿಬಂದ ಗಡವ, ಡಂಗುರ ಸಾರುತ್ತಾ ‘ಕೇಳ್ರಪ್ಪೋ ಕೇಳಿ ವನವಾಸದಿಂದ ಮರಳಿದ ಶ್ರೀ ರಾಮಚಂದ್ರ ಪ್ರಭು, ಸೀತಾ ಮಾತೆ, ಲಕ್ಷ್ಮಣ, ಮಾರುತಿಯಾದಿ ಕಿಕ್ಷಿಂದೆಗೆ ಭೇಟಿನೀಡುತ್ತಿದ್ದಾರೆ ನೀವೆಲ್ಲಾ ಸಕುಟುಂಬ ಪರಿವಾರ ಸಮೇತರಾಗಿ ಬಂದು ದರ್ಶನ ಭಾಗ್ಯ ಪಡೆಯಬೇಕು’ ನಿಮಗೆಲ್ಲಾ ಬಾಸ್ಮತಿ ಅನ್ನ, ಅವರೆಕಾಳು ಸಾರಿನ ಭಾರೀ ಬೃಷ್ಠಾನ ಭೋಜನವಿರುತ್ತೆ ಎಂದು ಸಾರಿಹೋದಾಗ ಆ ಭೋಜನವನ್ನು ನೆನೆದ ಮಂಗಗಳ ಹರ್ಷವನ್ನು ನೋಡಬೇಕಿತ್ತೊಮ್ಮೆ ಎನ್ನಿಸುತ್ತೆ. ಕಪಿಗಳ ಚಿನ್ನಾಟಗಳು ಮುಗಿಲು ಮುಟ್ಟುತ್ತಿವೆ ಎನ್ನುತ್ತಲೇ ಅಲ್ಲಿಗೆ ನೆಗೆದು ಬಂದ ಎರೆಡು ಹಿರಿಯ ಕೋತಿಗಳು, ಶ್ರೀರಾಮ ಬರುವ ಹೊತ್ತಾಯಿತು, ಸ್ವಾಗತಕ್ಕೆ ಸಜ್ಜಾಗಿ ಎಂದೊಡನೆಯೇ ನೆರೆದ ಕಪಿಗಳೆಲ್ಲಾ ನೆಗೆನೆಗೆದು ಹಾದಿ ಬೀದಿಯನ್ನೆಲ್ಲಾ ಶುಭ್ರಗೊಳಿಸಿ ತಳಿರು ತೋರಣ ಕಟ್ಟುತ್ತಾ ಬಾಸ್ಮತಿ ಅನ್ನ ಅವರೆ ಕಾಳು ಸಾರಿನ ಊಟ ಯಾವಾಗ ? ಎಂದು ಕೇಳಿದರೆ ಯಾರಿಗೆ ತಾನೆ ನಗು ಬರಲ್ಲ ಹೇಳಿ? ಸೋ ಅಲ್ಲಿನ ಪ್ರೇಕ್ಷಕರೆಲ್ಲಾ ಗೊಳ್.

ತರುವಾಗ ವೇದಿಕೆಗೆ ಮತ್ತೆ ಬಂದ ಗಡವ, ‘ಶ್ರೀರಾಮಚಂದ್ರರು ಆಗಮಿಸುತ್ತಿದ್ದಾರೆ’ ಎನ್ನುತ್ತಲೇ ಶ್ರೀರಾಮಚಂದ್ರರಿಗೆ ಸ್ವಾಗತಕೋರುವ ಗೀತೆಯ ಮಾಧುರ್ಯ ಮತ್ತ ಮತ್ತೆ ಕೇಳಬೇಕೆನ್ನಿಸುತು. ತಕ್ಷಣ ವೇದಿಕೆಗೆ ಬಂದರು ನೋಡಿ ಶ್ರೀರಾಮ, ಸೀತೆ, ಲಕ್ಷ್ಮಣ, ಹನ್ಮಂತ. ಗಾಡ್! ನೆರೆದವರೆಲ್ಲರ ಮುಗಿಲುಮುಟ್ಟಿದ ಮನತುಂಬಿ ತಟ್ಟಿದ ಚಪ್ಪಾಳೆ ಸದ್ದು. ಎಂಥಹ ಗಾಂಭೀರ್ಯದ ಅಭಿನಯ, ಏನವರ ಹಾವ ಭಾವ, ಹೆಜ್ಜೆ ಹೆಜ್ಜೆಯಲ್ಲೂ ದಿಟ್ಟ ಪ್ರದರ್ಶನ, ಬುಜದೆತ್ತರದ ನೇರಕ್ಕೆ ಮೊಳಕೈ ನಿಲ್ಲಿಸಿ ಇಷ್ಟಗಲ ಅಂಗೈಲಿ ರಾಮಾ ಸೀತೆ ಲಕ್ಷ್ಮಣರು ಆಶೀರ್ವಾದಿಸುತ್ತಿದ್ದರೆ, ಕೈಲಾಸವೆಲ್ಲಾ ಖಾಲಿ ಖಾಲಿ. ಎಲ್ಲಾ ದೇವತೆಗಳೂ ಧರೆಗಿಳಿದವರೇ ಅನ್ನಿಸಿತು. ಹಾಗೆ ದರ್ಶನ ನೀಡಿ ಅವರು ಹೋಗುತ್ತಲೇ ಶುರುವಾಗುತ್ತೆ ಕಪಿಗಳ ಮಾತು. ಅಯ್ಯಾ ನೋಡಿದ್ರಾ ಸೀತಾ ರಾಮರನ್ನ ? ಚೂರೂ ಸರಿಇಲ್ಲ, ಆ ಸೀತೆಗೆ ನಮ್ಮ ಥರಾ ಪಿಳಿ ಪಿಳಿ ಕಣ್ಣಿಲ್ಲ, ನೆಟ್ಟಗೊಂದು ಬಾಲಾನೂ ಇಲ್ಲ, ಬಾಲಾನೇ ಇಲ್ಲದ ಸೀತೆಯ ಸೌಂದರ್ಯ ಯಾತಕ್ಕೆ ಬಂತು? ಮತ್ತೆ ನಾನು ಸುಸ್ತು. ಇಷ್ಟು ವರ್ಷಗಳ ನನ್ನ ಕಲ್ಪನೆಯಲ್ಲೆಲ್ಲೂ ನಂಗೆ ಸೀತೆಗೊಂದು ಬಾಲ ಕೊಡಲಾಗಲಿಲ್ಲ. ಸೂಪರ್ ಗುರೂ…. ಎಂದುಕೊಳ್ಳುತ್ತಲೇ

ಮತ್ತೆ ಚುಕುಬುಕು ರೈಲಿನ ಪ್ರಯಾಣ ನಂಜನಗೂಡಿಗೆ. ಅವರೊಟ್ಟಿಗೆ ನಾವು. ಬಾಳೆಯ ತೋಟದ ಪಕ್ಕದ ಕಾಡಲಿ ವಾಸಿಸುತ್ತಿದ್ದವು ಮಂಗಗಳು, ಮಂಗಗಳೆಲ್ಲವು ಒಟ್ಟಿಗೆ ಸೇರುತ ಒಂದು ಪ್ರವಾಸವ ಮಾಡಿದವು… ಗಿವಿಗಿಂಪು ಹಾಡು ತಣಿಯುತ್ತಲೇ ವೇದಿಕೆ ತುಂಬಾ ಮಲಗಿದ ಮಂಗಗಳು. ವೇದಿಕೆಗೆ ಬಂದ ಅಜ್ಜ ಕೋತಿ ‘ ಹೇ ಮಕ್ಕಳಾ ಹೇಳ್ರೋ, ಇವತ್ತು ಹನುಮನಮವಾಸೆ ಏಳಿ ಇಂದು ಉಪವಾಸ ಮಾಡಬೇಕು’ ಎನ್ನುತ್ತಾ ತನ್ನ ವ್ರತವನ್ನು ಎಲ್ಲಾ ಮಂಗಗಳಿಗೂ ಹೇಳಿದಾಗ ಸರಿ ಮಾಡೋಣ ಎಂದು ಒಪ್ಪಿಕೊಂಡು ಸಮಯ ಸರಿಯುತ್ತಲೇ ಹಸಿದ ಕೋತಿಗಳೆಲ್ಲಾ ಅಲ್ಲಲ್ಲೇ ಮರಗಳ ಮೇಲೆ ಮಲಗುತ್ತವೆ. ಹಸಿವು ತಾಳಲಾಗದೆ ಒಂದು ಗಡವ ಬಂದು ‘ಅಜ್ಜಾ ಕೋತಿ ಈ ಕಾಡಿನ ಪಕ್ಕದಲ್ಲಿ ಬಾಳೆಯ ತೋಟವಿದೆ ನಾವು ಅಲ್ಲಿಯೇ ಉಪವಾಸ ಮಾಡೋಣ, ಇವತ್ತು ಅಲ್ಲಿಗೆ ಹೋದರೆ ನಾಳೆಯ ಕೆಲಸ ತಪ್ಪುತ್ತೆ’ ಅಂದಾಗ ಅಜ್ಜ ಕೋತಿ ಒಪ್ಪುತ್ತೆ ಎಲ್ಲವೂ ಬಾಳೆ ತೋಟಕ್ಕೆ ಬರ್ತವೆ. ನಮಗೆಲ್ಲಾ ಅಲ್ಲೊಂದು ಅಚ್ಚರಿ! ಆಗ ವೇದಿಕೆಗೊಂದು ಬಾಳೆಗಿಡಬರುತ್ತೆ ಥೇಟ್ ಬಾಳೆಗಿಡ ಆದರೆ ವರಿಜಿನಲ್ ಗೊನೆ, ಅದನ್ನು ನೋಡುತ್ತಲೇ ಮೊದಲೇ ಹಸಿದ ಕೋತಿಗಳೆಲ್ಲಾ ಅಜ್ಜ ಕೋತಿಗೆ ಈಗಲೇ ಬಾಳೆಹಣ್ಣನ್ನು ಕಿತ್ತಿಟ್ಟುಕೊಳ್ಳೋಣ . ನಾಳೇನೇ ತಿಂದರಾಯ್ತು ನಾಳೇಗೆ ಕೆಲಸ ಕಡ್ಮೆಯಾಗುತ್ತೆ ಅಂತ ಕೇಳಿದಾಗಲೂ ಅಜ್ಜಕೋತಿ ಒಪ್ಪುತ್ತೆ. ಆಗ ಇಪ್ಪತೈದು ಕೋತಿಗಳೂ ಆ ಗೊನೆಯಲ್ಲಿನ ಹಣ್ಣನ್ನು ಕಿತ್ತುಕೊಳ್ಳುತ್ತವೆ. ನಂತೆ ಹಸಿದ ದೇಹದ ಕೈಯಲ್ಲಿ ಬಾಳೆಹಣ್ಣಿದ್ದರೆ, ಸುಲಿಯದೆ ಮನಸ್ಸೆಂಗಾದೀತು? ಮತ್ತೆ ಅಜ್ಜನ ಕೇಳುತ್ತವೆ ಅದೇ ನಾಳೆಯ ಕೆಲಸ ಹಗುರು ಕಾರಣ. ಸುಲಿದದ್ದೂ ಆಯಿತು. ನಂತರ ಅಯ್ಯೋ ಧೂಳೆಲ್ಲಾ ಹಣ್ಣಿನ ಮೇಲೆ ಅದಕ್ಕೆ ಬಾಯಿಗೇ ಇಟ್ಟುಕೊಂಡು ಬಿಡ್ತಿವಿ, ಇನ್ನೇನು ಜಿಗಿದೇ ಬಿಡ್ತೀವಿ ಎನ್ನುತ್ತಾ ಬಾಳೆ ಹಣ್ಣನ್ನು ತಿಂದಾಗ ಅಜ್ಜಾ ಕೋತಿ, ಅಯ್ಯೋ ನನ್ನ ಉಪವಾಸ ವ್ರತವನ್ನು ಕೆಡಿಸಿದಿರಲ್ಲಾ ಎಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಾಗ. ನಂಗೆ ನಮ್ಮ ಸಮಾಜದಲ್ಲಿ ಸೋ ಕಾಲ್ಡ್ ಆಸ್ತಿಕರು ನಡೆಸೋ ಉಪವಾಸ ವ್ರತವನ್ನು ಇವು ಅಣಕಿಸಿದವು ಎನ್ನಿಸಿತು.

ಅಲ್ಲಿಂದ ಮತ್ತೆ ಚುಕು ಬುಕು ರೈಲಿನ ಪಯಣ ಬೆಂಗಳೂರಿನ ಕಬ್ಬನ್ ಪಾರ್ಕ್ ಗೆ. ಅಷ್ಟೊತ್ತಿಗೆಲ್ಲಾ ನಾವು ನೆಟ್ಟ ಕಣ್ಣು ನೆಟ್ಟಂಗೆ ವೇದಿಕೆ ದಿಟ್ಟಿಸುತ್ತಿರುವಾಗಲೇ ನಮ್ಮ ಪಕ್ಕದಲ್ಲಿ ಅಂದರೆ ಸಭಾಂಗಣದ ಕೊನೆಯಲ್ಲಿ ಟೋಪಿ ಬೇಕೇನ್ರಪ್ಪಾ ಟೋಪಿ… ಎಂದಾಗ ನಾವೆಲ್ಲಾ ತಬ್ಬಿಬ್ಬು. ಹಾಗೆ ಟೋಪಿ ಮಾರುವ ಪಾತ್ರ ನೆರೆದ ಪ್ರೇಕ್ಷಕರಿಗೆ ಟೋಪಿ ಮಾರುತ್ತಾ ವೇದಿಕೆ ಏರಿದಾಗ ಆ ಪಾರ್ಕ್ ನಲ್ಲಿ ಚಿಲ್ಲರೆ ವ್ಯಾಪಾರಿಗಳ ಹಾಜರ್. ಅವರೂ ಟೋಪಿಯನ್ನು ಕೊಳ್ಳದ ಕಾರಣ ಸುಸ್ತಾದ ಟೋಪಿ ಮಾರುವವ ಹಣೆ ಚಚ್ಚಿಕೊಂಡು ಸುಸ್ತಾಗಿ ನಿದ್ರೆಗೆ ಜಾರಿದಾಗ ಮತ್ತೆ ಅಲ್ಲಿಗೆ ಕಪಿ ಸೈನ್ಯ ಎಂಟ್ರಿ. ಎಸ್! ನಿಮ್ಮ ಊಹೆ ಸರಿ. ಹಾಗೆ ಬಂದ ಕಪಿ ಪಡೆ ಅಲ್ಲಿರೋ ಎಲ್ಲಾ ಟೋಪಿಗಳನ್ನೂ ತಗೊಂಡು ಮರ ಏರಿದ ಮೇಲೆಯೇ ಟೋಪಿ ಮಾರುವವನಿಗೆ ಎಚ್ಚರ. ತಕ್ಷಣ ತನ್ನ ಟೋಪಿಗಳೆಲ್ಲಾ ಕೋತಿಗಳ ಕೈಯಲ್ಲಿ . ನಮಗೆಲ್ಲಾ ತಿಳಿದಂತಹ ಕಥೆಯಲ್ಲಿ ಹೀಗೆ ಟೋಪಿ ಮಾರುವವನು ತನ್ನ ತಲೆಯ ಮೇಲಿನ ಟೋಪಿಯನ್ನು ನೆಲಕ್ಕೆ ಎಸೆದಾಗ ಮರದ ಮೇಲಿನ ಕೋತಿಗಳೂ ತಮ್ಮ ತಲೆಯ ಮೇಲಿನ ಟೋಪಿಯನ್ನು ನೆಲಕ್ಕೆಸೆಯುತ್ತವೆ. ಟೋಪಿ ಮಾರುವವನು ಅವುಗಳನ್ನಾಯ್ದುಕೊಂಡು ಹೊರಡುತ್ತಾನೆ. ಆದರೆ ಇಲ್ಲಿ ಹಾಗಾಗೊಲ್ಲ. ಟೋಪಿ ಮಾರುವವ ತನ್ನ ಟೋಪಿ ನೆಲಕ್ಕೆಸೆದರೆ, ವೇದಿಕೆಯ ಮರದಲ್ಲಿಯ ಕೋತಿಗಳು ತಮ್ಮ ಕೈಯಲ್ಲಿನ ಟೋಪಿಯನ್ನು ಮತ್ತೆ ತಲೆಗೇರಿಸುತ್ತಾ,’ ಹೇ ಮನುಷ್ಯಾ, ನಮ್ಮನ್ನೇನು ದಡ್ಡರು ಎಂದುಕೊಂಡಿದ್ದಿಯಾ? ಅವೆಲ್ಲಾ ನಡೆಯೊಲ್ಲ’ ಎಂದಾಗ ಟೋಪಿ ಮಾರುವವನ ಮುಖ ಮುದುಡುತ್ತೆ ಅವನ ಚಿಂತಾಜನಕ ಸ್ಥಿತಿಗೆ ಮರುಗಿದ ಕೋತಿಗಳು, ‘ಹೇ ಮನುಷ್ಯಾ ನಾವು ನಿನ್ನಂಗೆ ಇನ್ನೊಬ್ರ ಹೊಟ್ಟೆ ಮೇಲೆ ಹೊಡೆಯೊಲ್ಲ. ತಗೋ ನಿನ್ನ ಟೋಪಿ’ ಎಂದು ಎಲ್ಲಾ ಟೋಪಿಗಳನ್ನು ನೆಲಕ್ಕೆಸೆದಾಗ ಟೋಪಿ ಮಾರುವವನು ಅವುಗಳಿಗೆ ವಂದಿಸಿ ಟೋಪಿಗಳನ್ನಾಯ್ದು ವೇದಿಕೆಯಿಂದ ಹೊರಟಾಗ, ಮಾನವೀಯತೆ ಎನ್ನೋದು ಯಾರಪ್ಪನ ಸ್ವತ್ತೂ ಅಲ್ಲಬಿಡು ಎಂದುಕೊಂಡೆ, ನಂತರ ಕೋತಿ ಕೋತಿ ತಮಾಷೆಯಲ್ಲ ಕೋತಿಯಿಂದ ಕೂಡ ನಾವು ಪಾಠ ಕಲಿಬೋದು, ಅದರ ಹಾಗೆ ಲಾಗಾ ಹಾಕಿ ಸರ್ಕಸ್ ಮಾಡಬೋದು ಕೋತಿಯೆಂದು ಒಂಟಿಯಾಗಿರಲ್ಲ ಗೊತ್ತಾ ತಮ್ಮಣ್ಣಾ… ಗುಂಪು ಗುಂಪಾಗಿ ಸುತ್ತಿರುತ್ತವೆ ತಿಳ್ಕೋ ತಿಮ್ಮಣ್ಣಾ, ಸಂಘ ಜೀವನ ಅಂದ್ರೆನಂತ ಅವುಕ್ಕೇ ಗೊತ್ತಣ್ಣಾ .. ಕೋತಿ ಅಂದ್ರೆ ತಮಾಷೆಯಲ್ಲ, ಮನುಷ್ಯನ ಮೂಲ ಕೋತಿ ಅಂತ ಗೊತ್ತಾ ತಿಮ್ಮಪ್ಪಾ… ಅಪ್ಪ ಗೊತ್ತಾ ತಿಮ್ಮಪ್ಪಾ.. ನಮ್ ತಾತನ್ ತಾತನ್ ತಾತನ್ ತಾತ ಕೋತಿ ಅಂತಪ್ಪಾ… ನಮ್ ತಾತನ್ ತಾತನ್ ತಾತನ್ ತಾತಾ….? ಎಂದು ಪ್ರೇಕ್ಷಕನ್ನು ಕೇಳುತ್ತಲೇ ಎಲ್ಲರೂ ಒಕ್ಕೋರಗಲಿನಿಂದ ‘ಕೋ,,,,ತಿ’ ಅಂದುಬಿಡೋದಾ… ಎಂಥಹ ಅದ್ಭುತ ನಾಟಕ ನೋಡಿದ್ದು ನಾನು. ತೀರಾ ಒತ್ತಡ ಜಾಸ್ತಿಯಾದಾಗ ನಾಟಕ ನೋಡೋದು ಒಳ್ಳೇ ಮದ್ದು ಅದರಲ್ಲೂ ಮಕ್ಕಳ ನಾಟಕ ಅನ್ನೋದು ಒತ್ತಡ ಕಳೆಯೋ ಸಂಜೀವಿನಿ ಅನ್ನಿಸ್ತು.

ನಾಟಕ ಮುಗಿದ ಮೇಲೆ ವೇದಿಕೆಗೆ ಬಂದ ರಂಗಾಯಣ ರಘುರವರು ನಾಟಕದ ನಿರ್ದೇಶಕ ಚಂದ್ರ ಕೀರ್ತಿ ಮತ್ತು ನಾಟಕದ ತಾಂತ್ರಿಕ ತಂಡವನ್ನು ಅಭಿನಂದಿಸಿದರೆ, ಮತ್ತೆ ಶಾಂತ ನಾಗರಾಜ್ ಮೇಡಂ ವೇದಿಕೆಯೇರಿ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಮಕ್ಕಳಿಗೆ ಮುಂದಿನ ಸಲ ಬರ್ತೀರಾ ? ಎಂದು ಕೇಳಿದಾಗ ಮಕ್ಕಳೆಲ್ಲಾ ‘ವಂದೇ ಮಾತರಂ’ ಅನ್ನಂಗೆ ಒಕ್ಕೋರಗಲಿನಿಂದ ಹ್ಞೂಂಕರಿಸಿದರು.

Avadhi link-http://avadhimag.com/?p=87715

Advertisements