Archive for ಮಾರ್ಚ್ 29, 2013


Children Theatre Workshop

ಸಂಚಾರಿ ಥಿಯೇಟರ್ ಏಪ್ರಿಲ್ 15 ರಿಂದ ಮೇ 4 ರ ವರೆಗೆ ಮಕ್ಕಳಿಗಾಗಿ ರಂಗಶಿಬಿರವೊಂದನ್ನು ಆಯೋಜಿಸಿದೆ.

ವರ್ಷವಿಡೀ ಟೆಸ್ಟ್ ಗಳು, ಪ್ರಾಜೆಕ್ಟ್ ಗಳು, ಪರೀಕ್ಷೆಗಳಲ್ಲಿ ಬಸವಳಿದು ಹೋಗಿರುವ ಮಕ್ಕಳು ಈಗ ಬೇಸಿಗೆಯಲ್ಲಿ ಸಂತೋಷದಿಂದ ಕಳೆಯುವಂತಾಗಲು ಅವರಿಗೆ ಅವರದೇ ಆದ ಆವರಣವೊಂದನ್ನು ಸೃಷ್ಟಿಸುವುದು ಸಂಚಾರಿ ಥಿಯೇಟರ್ ನ ಉದ್ದೇಶ. ಇಲ್ಲೆ ತಮಾಷೆ, ನಗು, ಕೇಕೆ, ಮೋಜು, ಹಾಡು, ಲಯ, ತಾಳ, ಕುಣಿತ, ಚಿತ್ರ, ಬಣ್ಣ, ಮುಖವಾಡ ಕೊನೆಗೆ ನಾಟಕ ಇರುತ್ತದೆ.

ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಿ ಸಂಜೆ 4.30 ರ ವರೆಗೆ ಇರುತ್ತದೆ. 20 ದಿನಗಳ ಈ ಶಿಬಿರದಲ್ಲಿ ನಡುವೆ ರಜೆ ಇರುವುದಿಲ್ಲ. ಮದ್ಯಾಹ್ನದ ಊಟವನ್ನು ಮಕ್ಕಳು ತರಬೇಕು.

Children Workshop

ಈ ಶಿಬಿರದಲ್ಲಿ ಮಂಗಳಾ.ಎನ್ ಮತ್ತು ಗಜಾನನ.ಟಿ.ನಾಯ್ಕ ಅವರು ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸುತ್ತಾ ಶಿಬಿರದ ನಿರ್ದೇಶಕರಾಗಿರುತ್ತಾರೆ. ಜೊತೆಗೆ ಸುರಭಿ ವಸಿಷ್ಟ, ಚಂದ್ರಕೀರ್ತಿ, ಕಿರಣ ಮತ್ತು ಸಂಚಾರಿ ಕಲಾವಿದರು ಇರುತ್ತಾರೆ. ಅಲ್ಲದೆ ಕೆಲವು ಅತಿಥಿ ಶಿಕ್ಷಕರು ಆಗಮಿಸುತ್ತಾರೆ. 20 ದಿನಗಳ ಈ ಶಿಬಿರದಲ್ಲಿ ಮಕ್ಕಳಿಗೆ ನಾಟಕವೊಂದಕ್ಕೆ ಸಿದ್ಧವಾಗುವಾಗಿನ ಎಲ್ಲ ಕಲಿಕೆಗಳಿಗೂ ಮುಖಾಮುಖಿಯಾಗಿಸುತ್ತೇವೆ. ಹಾಡು, ತಾಳ, ಲಯ, ಕುಣಿತ, ಮೈಮ್, ಚಿತ್ರ, ಬಣ್ನ, ಮುಖವಾಡ, ವಾಚನ ಎಲ್ಲದರ ಪರಿಚಯ ಮಾಡಿಕೊಡುತ್ತೇವೆ. ಮುಖ್ಯ್ವವಾಗಿ ಮಕ್ಕಳು ಗುಂಪಿನಲ್ಲಿ ಒಂದಾಗಿ ಬದುಕುವುದನ್ನು ಅನುಭವಕ್ಕೆ ತಂದುಕೊಡುತ್ತೇವೆ.

Children Theatre Workshop

ನಂತರ ಮಕ್ಕಳ ಗುಂಪನ್ನು ಅರ್ಥ ಮಾಡಿಕೊಳ್ಳುತ್ತಾ, ಅವರಿಗೆ ಹೊಂದುವಂತಹ ನಾಟಕವೊಂದನ್ನು ಆಯ್ಕೆ ಮಾಡಿಕೊಂಡು ಮೇ ೪ ರಂದು ಪ್ರದರ್ಶನವಾಗುವಂತೆ ಸಿದ್ದಪಡಿಸುತ್ತೇವೆ.

ನಿಮ್ಮ ಮಕ್ಕಳ ಹೆಸರನ್ನು ಏಪ್ರಿಲ್ 1 ರಿಂದ ನೊಂದಾಯಿಸಿಕೊಳ್ಳಬಹುದು.ಸಂಜೆ 6 ರಿಂದ 8.30 ವರೆಗೆ
ಅರ್ಜಿಗಳನ್ನು ನೀಡಲಾಗುತ್ತದೆ. ಇನ್ನೂ ಹೆಚ್ಚಿನ ವಿವರಕ್ಕೆ ಸಂಪರ್ಕಿಸಿ: 88843 45569

Children mask

rangayana

ರಂಗಾಯಣದ ಕಲಾವಿದರು ತಮ್ಮ ಜೀವನದ ಅತ್ಯಂತ ಚೈತನ್ಯಪೂರ್ಣವಾಗಿದ್ದ ಹೊತ್ತಿನಲ್ಲಿ ರಂಗಾಯಣ ಸಂಸ್ಥೆಗೆ ಸೇರಿಕೊಂಡವರು. ೨೪ ವರುಷಗಳ ಕಾಲ ಇಡೀ ಸಂಸ್ಥೆಯನ್ನು ಹಲವರ ನಿರ್ದೇಶನದಲ್ಲಿ ಕಟ್ಟಿದ್ದಾರೆ. ರಂಗಾಯಣದ ಕಲಾವಿದರು ತಯಾರಾಗಿದ್ದು ಅಭಿನಯದಲ್ಲಿ ಶ್ರೇಷ್ಟತೆಯನ್ನು ಸಾಧಿಸಬೇಕು ಎಂಬ ಕಾರಣಕ್ಕಾಗಿಯೇ ಹೊರತು ಸಂಘಟಕರಾಗಲಿ, ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸಲಿ ಎಂದಲ್ಲ. ಆದರೂ ತಮ್ಮ ಅನುಭವದಿಂದಾಗಿ ಕೆಲವು ಬಾರಿ ಆ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಅವರು ಮೂಲಭೂತವಾಗಿ ನಟನಟಿಯರು. ಆದರೆ ಇಂದು ತಮ್ಮ ಮನೆಯಲ್ಲಿ ತಮಗೇ ಜಾಗವಿಲ್ಲದೆ ಬೀದಿಯಲ್ಲಿ ಕುಳಿತಿದ್ದಾರೆ. ಹಿಂದೆ ನಿಗದಿಪಡಿಸಿದಂತೆ ರಂಗಾಯಣದ ಕಲಾವಿದರು ಅಭಿನಯಿಸಬೇಕಾಗಿದ್ದ ತಮ್ಮ ನಾಟಕವನ್ನು ತಾವು ಆಡಲು ಆಗದಂತಹ ‘ತಂತ್ರದಾಟ’ವೊಂದಕ್ಕೆ ಬಲಿಯಾಗಿದ್ದಾರೆ. ಅದಕ್ಕಾಗಿ ಹೋರಾಟ ಮಾಡುತ್ತಾ ಬೀದಿಯಲ್ಲಿ ಬಂದು ಕುಳಿತಿದ್ದಾರೆ.

Rangayana Logoರಂಗಾಯಣ ಸಂಸ್ಥೆ ಇವತ್ತು ಇಡೀ ದೇಶ ತಿರುಗಿ ನೋಡುವ ಹಾಗೆ ಘನತೆಯಿಂದ ಕೆಲಸ ಮಾಡುತ್ತಿರುವ ಹೊತ್ತಿನಲ್ಲಿ ರಂಗಭೂಮಿ ಚಟುವಟಿಕೆಗಳ ವಿಕೇಂದ್ರಿಕರಣದ ನೆಪವೊಡ್ಡಿ ಸಂಸ್ಥೆಯ ಉಸಿರಾಗಿರುವ ಕಲಾವಿದರನ್ನು ಶಿವಮೊಗ್ಗ ಮತ್ತು ಧಾರವಾಡಕ್ಕೆ ವರ್ಗಾವಣೆ ಮಾಡಿರುವುದು ಸಾಧುವಲ್ಲ. ಯಾವ ಸಿದ್ಧತೆಯೂ ಇಲ್ಲದೆ, ಸರಕಾರದ ದುರಾಸೆಗೆ ಹುಟ್ಟಿಕೊಂಡಿರುವ ಈ ಎರಡು ಮರಿರಂಗಾಯಣಗಳು ಹಿಂದೆ ಬಿ.ವಿ.ಕಾರಂತರು ಬಯಸುತ್ತಿದ್ದಂತಹ ಯಾವ ತಾತ್ವಿಕ ನೆಲೆಗಟ್ಟಿಲ್ಲದೆ ಬಲವಂತಕ್ಕೆ ಹುಟ್ಟಿಕೊಂಡಿರುವ ಶಾಖೆಗಳು. ಆ ಶಾಕೆಗಳನ್ನು ಪ್ರಾರಂಭಿಸುವ ಮತ್ತು ಆ ಶಾಖೆಗಳಿಗೆ ನಿರ್ದೇಶಕರನ್ನು ನೇಮಿಸುವ ಹೊತ್ತಿನಲ್ಲಿ ನೆನಪಾಗದ ರಂಗಾಯಣದ ಕಲಾವಿದರನ್ನು ಈಗ ಏಕಾಏಕಿ ಯಾವ ತಳಹದಿಯೇ ಇಲ್ಲದ, ಸಾಂಸ್ಕೃತಿಕ ನಿಯಮಾವಳಿಗಳಿಲ್ಲದ, ಸೃಜನಾತ್ಮಕ ವಾತಾವರಣವೇ ಇಲ್ಲದ ಜಾಗಗಳಿಗೆ ನೀತಿ ಸಂಹಿತೆಯನ್ನೂ ಉಲ್ಲಂಘಿಸಿ, ರಾತ್ರೋ ರಾತ್ರಿ ಅವಸರ ಅವಸರವಾಗಿ ವರ್ಗಾವಣೆ ಮಾಡುವ ಅಗತ್ಯವಾದರೂ ಏನಿತ್ತು? ಯಾವ ಕಲಾವಿದನೂ ಹೊಸದಾಗಿ ಪ್ರಾರಂಭವಾಗಿರುವ ಈ ಶಾಖೆಗಳಿಗೆ ಹೋಗಿ ಕೆಲಸ ಮಾಡಲು ತಯಾರಿಲ್ಲ ಎಂದು ಹೇಳುತ್ತಿಲ್ಲ.

12631265ಆದರೆ ಅದಕ್ಕೆ ಬೇಕಾದ ಸೌಲಭ್ಯಗಳು, ಸಿದ್ಧತೆಗಳು ಮತ್ತು ಸಾಂಸ್ಕೃತಿಕ ನಿಯಮಾವಳಿಗಳು ಇಲ್ಲದೆ ಇರುವ ಕಡೆ ಗುಳೇ  ಹೊರಟಂತೆ ಆರಾರು ಮಂದಿ ಹೋಗಿ ಕೆಲಸವೇ ಇಲ್ಲದೆ ಖಾಲಿ ಕೂರಲು ತಯಾರಿಲ್ಲ. ಆಮೇಲೆ ‘ಸುಮ್ಮನೆ ಖಾಲಿ ಕುಳಿತಿದ್ದೀರಿ’ ಎಂಬ ಅಪವಾದ ಹೊರಲು ತಯಾರಿಲ್ಲ. ಮೇಲ್ನೋಟಕ್ಕೆ “ರಂಗಾಯಣ ಕಲಾವಿದರ ವಿಕೇಂದ್ರಿಕರಣ ” ಅದ್ಭುತ  ಯೋಜನೆಯಂತೆ ತೋರಿಬರುವ ಹಾಗೆ ಗಿಲೀಟು ಹಚ್ಚಿ ಮಾತಾಡುವ ಬದಲು ಅವರು ಅಲ್ಲಿ ಯಾವ ಸಿದ್ಧತೆಯನ್ನು ಮಾಡಿ ಇವರನ್ನು ಅಲ್ಲಿಗೆ ತೆರಳುವಂತೆ ಒತ್ತಾಯಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಹೇಳುವಂತಾಗಲಿ. ಈ ಕೈಂಕರ್ಯಕ್ಕೆ ಅವರು ರೂಪಿಸಿರುವ ರೂಪರೇಷೆಗಳನ್ನು ತಿಳಿಸುವಂತಾಗಲಿ. ಈ ಕೆಲಸವನ್ನು ಕಲಾವಿದರು ನಿರ್ವಹಿಸಲು ಸರಕಾರ  ಕಲಾವಿದರೊಡನೆ ಯಾವ ನಿಯಮಾವಳಿಗಳಿಗೆ ಬದ್ಧವಾಗಿದೆ ಎಂಬುದನ್ನು ತಿಳಿಸದೇ ಕೇವಲ ಆದೇಶಪತ್ರಗಳನ್ನು ಹಂಚುವುದು ತರವಲ್ಲ.

rangayana protestಈಗಂತೂ ಕನ್ನಡ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಕನ್ನಡ ಸಂಸ್ಥೆಗಳನ್ನು ಮುಚ್ಚುತ್ತಿದ್ದಾರೆ. ಕನ್ನಡಿಗರಿಗೆ ಇರುವ ಕನ್ನಡ ರೆಪೆರಟರಿಯನ್ನು ಮುಚ್ಚಲು ಹೊರಟಿದ್ದಾರೆ. ಇವೆಲ್ಲವೂ ಯಾವ ಪುರುಷಾರ್ಥಕ್ಕೆ? ಕನ್ನಡತನವನ್ನು ರಿಂಗಣಿಸುವ ಸಾಂಸ್ಕೃತಿಕ ಸಂಸ್ಥೆಗಳನ್ನು ಕರ್ನಾಟಕ ಸರಕಾರವೇ ಮುಚ್ಚುವಂತಾದರೆ ಸಾಮಾನ್ಯ ಜನ, ರೈತಾಪಿ ಜನ, ಕಾರ್ಮಿಕರು, ಕನ್ನಡಿಗರು ತಾವು ಮಾತನಾಡಬೇಕಾದ ಭಾಷೆಯನ್ನು ಹುಡುಕಾಡಬೆಕಾದ ಪರಿಸ್ಥಿತಿ ಎದುರಾಗುತ್ತದೆ. ೨೪ ವರುಷಗಳ ಕಾಲ ನಿರಂತರವಾಗಿ ರಂಗಭೂಮಿಯನ್ನೇ ನಂಬಿಕೊಂಡು ಕೆಲಸ ಮಾಡುತ್ತಿರುವ ಈ ಪ್ರಬುದ್ಧ ತಂಡವನ್ನು  ಮರ್ಯಾದೆಯುತವಾಗಿ ನಡೆಸಿಕೊಳ್ಳಬೇಕಾಗಿದೆ; ಉಳಿಸಿಕೊಳ್ಳಬೇಕಾಗಿದೆ; ಹೇಳಿಕೆ ಮಾತುಗಳಿಗೆ ಕಿವಿಗೊಡುವವರಿಂದ, ಕಲಾವಿದರ ಬದುಕಿನ ರಂಗನ್ನು ಕಸಿದುಕೊಳ್ಳುತ್ತಿರುವುದರಿಂದ ರಕ್ಷಿಸಿಕೊಳ್ಳಬೇಕಾಗಿದೆ.

625579_618614454819403_687911564_n

ಬಿ.ವಿ.ಕಾರಂತರು ಸ್ಥಾಪಿಸಿದ ರಂಗಾಯಣ ಸಂಸ್ಥೆ ತನ್ನ ೨೫ನೇ ವರುಷದ ಸಂಭ್ರಮವನ್ನು ಆಚರಿಸಬೇಕಾಗಿರುವ ಸಂದರ್ಭದಲ್ಲಿ “ರಂಗಾಯಣದ ಸರ್ವನಾಶಕ್ಕೆ ಶಪಥ ತೊಟ್ಟವರಂತೆ ವರ್ತಿಸುತ್ತಿರುವವರ ಹುನ್ನಾರಕ್ಕೆ ಬಲಿಯಾಗಿರುವುದು ಕನ್ನಡ ರಂಗಭೂಮಿಯ ದುರಂತ! ಇಂಥ ಹುನ್ನಾರ ನಡೆಯುತ್ತಿದ್ದರೂ ತಮಗದರ ಕಡೆ ಪರಿವೆ ಇಲ್ಲದ ಹಾಗೆ ದಿವ್ಯನಿರ್ಲಕ್ಷ್ಯ ತೋರಿಸುತ್ತಾ ವೈಯಕ್ತಿಕ ನೆಲೆಯಲ್ಲಿ ರಂಗಸಂಸ್ಥೆಯನ್ನೂ ಕಲಾವಿದರನ್ನೂ ದೂಷಿಸುತ್ತಾ ತಮ್ಮ ಬೇಳೆ ಬೇಯಿಸಿಕೊಂಡು  ಜಾರಿಕೊಳ್ಳುತ್ತಿರುವವರ ಮಧ್ಯೆಯೇ ಕನ್ನಡ ರಂಗಭೂಮಿ , ರಂಗಭೂಮಿಯ ಹೊರಗಡೆಯವರ ಜೊತೆ ಹೋರಾಟ ಮಾಡುತ್ತಲೇ ಒಳಗಿರುವವರ ಜೊತೆಯಲ್ಲೂ ಹೋರಾಡಬೇಕಾದ ಪರಿಸ್ಥಿತಿಯಲ್ಲಿ ಬಂದುನಿಂತಿದೆ.

-ಮಂಗಳಾ.ಎನ್