NSD- Malebillu'13

'ನರಿಗಳಿಗೇಕೆ ಕೋಡಿಲ್ಲ?'

G N Ashok Vardhanನರಿಗಳಿಗೇಕೆ ಕೋಡಿಲ್ಲ – ಕುವೆಂಪು ಬರೆದ ಮಕ್ಕಳ ನಾಟಕ. ರಂಗ ಪ್ರಯೋಗದ ಭವ್ಯ ಕಲ್ಪನೆಯೇನೂ ಇಲ್ಲದ, ಇಟ್ಟೂ ಕೊಳ್ಳದ, ಕೇವಲ ಕಾವ್ಯ ಸಂತೋಷಕ್ಕೇ ತಾನು ನಾಟಕವನ್ನು ಬರೆದೆನೆಂದು ಹೆಮ್ಮೆಯಿಂದಲೇ (ಕ್ಷಮಾಪೂರ್ವಕವಾಗಿ ಅಲ್ಲ) ಹೇಳಿಕೊಂಡ ಕುವೆಂಪು ಕೃತಿಯನ್ನು ತುಂಬ ಸಮರ್ಥವಾಗಿಯೇ ಪ್ರದರ್ಶನಕ್ಕಳವಡಿಸಿದ್ದರು ನಿರ್ದೇಶಕಿ ಎನ್. ಮಂಗಳಾ. ಮನುಷ್ಯರ ಹಂಗೇ ಇಲ್ಲದ ಈ ನಾಟಕದಲ್ಲಿ ವನ್ಯ ಜೀವವೈವಿಧ್ಯವಷ್ಟೂ – ಮುಗ್ಧ ಗುಬ್ಬಿದಂಪತಿ, ಉದಾತ್ತಹುಲಿ, ಬೋಳೇಕರಡಿ, ತಂತ್ರಗಾರನರಿ, ಬುದ್ಧಿಜೀವಿಗೂಬೆಗಳೆಲ್ಲ ಸದಸ್ಯರಾಗಿರುವುದೇ ಪ್ರಾಥಮಿಕ ಕುತೂಹಲಕಾರೀ ಅಂಶ. ಅವು ತಮ್ಮ ಪ್ರಾಕೃತಿಕ ವೈಶಿಷ್ಟ್ಯಗಳೊಡನೆ ಮನುಷ್ಯ ಸಮಾಜದ ಗುಣದೋಷಗಳನ್ನೂ (ಆತಿಥ್ಯ, ಶಿಶುಪ್ರೀತಿ, ಸತ್ಯನಿಷ್ಠೆ, ವಿಶ್ವಾಸದ್ರೋಹ ಎಲ್ಲಕ್ಕೂ ಮುಖ್ಯವಾಗಿ ಗುಬ್ಬಕ್ಕ ಬೆಳಿಗ್ಗೆ ನಾಗರಿಕ ಸಮಾಜದ ಭಾಗವಾದ ಹಸುವಿನ ಹಾಲು ಕರೆಯುವುದು ಇತ್ಯಾದಿ) ಪೋಷಿಸುವ ಕ್ರಮದಿಂದ (ವಾಲ್ಟ್ ಡಿಸ್ನಿಯ ನೆನಪು ದಟ್ಟವಾಗಿ ಕಾಡುತ್ತದೆ) ಮಕ್ಕಳಿಗೆ ಬಲು ಪ್ರಿಯವಾದದ್ದರಲ್ಲಿ ಏನೂ ಆಶ್ಚರ್ಯವಿಲ್ಲ. ಹುಲಿ, ಕರಡಿ ಪ್ರೇಕ್ಷಕರ ನಡುವಿನಿಂದ ಭಾರೀ ಧಾಂ ಧೂಂನೊಡನೆ ರಂಗಪ್ರವೇಶಿಸಿದ್ದು (ಯಕ್ಷಗಾನ ಪ್ರೇಕ್ಷಕರಿಗೆ ಇದೇನು ಹೊಸತಲ್ಲ), ಮರಿ ಕಳೆದುಕೊಂಡ ಗುಬ್ಬಕ್ಕನ ಆತಂಕಕ್ಕೆ ಪ್ರೇಕ್ಷಕರೂ ಸ್ಪಂದಿಸಿದಂತೆ ಮಾಡಿದ್ದು, ನವಿಲುಗುಡ್ಡೆಯ ಒಂದೇ ಸೆಟ್ಟಿನೊಡನೆ ಇಡೀ ನಾಟಕ ನಡೆದರೂ ಏಕತಾನತೆ ಕಾಡಲಿಲ್ಲ.

ಕೊನೆಯಲ್ಲಿ ಬೆಂಗಳೂರಿನ ಸಂಚಾರಿ ಥಿಯೇಟ್ರು, ಒಂಟಿಕೊಂಬಿನ ಸುಂದರಾಂಗನಾಗಿದ್ದ ನರಿಯನ್ನು ಬೋಳನಾಗಿಸಿದಾಗ ಚಪ್ಪಾಳೆ ಹೊಡೆದು ಸಂಭ್ರಮಿಸುವುದರಲ್ಲಿ ಪ್ರೇಕ್ಷಕ ಸಮೂಹದ ದೊಡ್ಡವರೂ (ವೈದೇಹಿ ಹೇಳಿದಂತೆ ಮಕ್ಕಳ ಹೃದಯ ಉಳ್ಳವರಾದ್ದಕ್ಕೆ) ಹಿಂದುಳಿಯಲಿಲ್ಲ.

ಕುವೆಂಪು ವೈಚಾರಿಕತೆ ಪ್ರಕೃತಿಯ ಮಹತ್ವಕ್ಕೆ ಹೆಚ್ಚಿನ ಅಡಿಗೀಟು ಬರುವಂತೆ ಸಾಹಿತ್ಯ ನಿರ್ವಹಿಸಿದ್ದು ಮನನೀಯ. ಉದಾಹರಣೆಗೆ – ಮೊಟ್ಟೆ ಮರಿಗಳ ಕೊಡುಗೆಯ ಕಾಲಕ್ಕೆ ಗುಬ್ಬಿ ದಂಪತಿ ಕೋರುವುದು ‘ಸೃಷ್ಟಿಶಕ್ತಿ’ಯ ಹಾರೈಕೆ, ಬಯಸಿದ್ದು ‘ಜೀವನಮ್ಮ’ನ ಅಭಯ. ಆದರೂ ಮರಿಗಳು ಬಂದಕಾಲಕ್ಕೆ ಗುಬ್ಬಣ್ಣನನ್ನು ಹರಕೆ ಸಂದಾಯಿಸಲು ಕಾಶಿಗೆ ಹೊರಡಿಸುವಲ್ಲಿ ‘ಮಂದಿರ ಮಸಜೀದುಗಳನ್ನು ತೊರೆದು ಬನ್ನಿ’ ಎಂದ ಕುವೆಂಪು ಎಡವಿದಂತನ್ನಿಸಿತು. (ಹೋಮರನೂ ತೂಕಡಿಸುತ್ತಾನೆ!) ನಾನು ಬಾಲ್ಯದಲ್ಲಿ ಓದಿದ ಪಂಜೆಯವರ ‘ಅರ್ಗಣೆಮುದ್ದೆ’ ಕತೆಯಲ್ಲಿ ವಿವರಗಳು ಮಾತ್ರ ಸ್ವಲ್ಪ ಬೇರೆ. ಅಲ್ಲಿನ ತಂತ್ರಗಾರ ನರಿಗೆ ಸೋರೆಹಕ್ಕಿ ಜೋಡಿಯ ದೈನಂದಿನ ಆಹಾರ ಸಂಗ್ರಹದ ಓಡಾಟದ ಬಿಡುವೇ ಅವುಗಳ ಮರಿಗಳನ್ನು ನುಂಗಲು ಸಾಕಾಗಿತ್ತು!

ಕೃಪೆ : http://www.athreebook.com/

http://avadhimag.com/

Advertisements