ಕರ್ನಾಟಕಕ್ಕೊಬ್ಬನೇ ಚೀನೀ…

ಹಾಗಂತ ಹೇಳ್ತಿರೋದು ನಾನಲ್ಲ. ಹಾಗೆ ಹೇಳಿದ್ದು, ಇಡೀ ಭಾರತೀಯ ರಂಗಭೂಮಿಯನ್ನಾವರಿಸಿದ, ರಂಗಸಂಗೀತಕ್ಕೆ ಹೊಸ ದಿಕ್ಕು ತೋರಿಸಿದ ಬಿ.ವಿ.ಕಾರಂತರು.

ಚೀನೀ ಸರ್, ಏನು ಅನ್ನೋದು ಬಹುಶಃ ಅವರೊಡನೆ ಕೆಲಸ ಮಾಡಿದ ಪ್ರತಿಯೊಬ್ಬರ ಅನುಭವಕ್ಕೆ ಬಂದಿರುವ ವಿಷಯ. 10 ಅಥವಾ 15 ವರ್ಷಗಳ ಹಿಂದೆ ಮಾಡಿದ ನಾಟಕವನ್ನು ಮತ್ತೆ ಮರುಪ್ರದರ್ಶನ ಮಾಡಬೇಕಾದರೆ ಸಾವಿರ ತೊಂದರೆಗಳು ಎದುರಾಗುತ್ತವೆ. ಆದರೆ ಆ ನಾಟಕದ ಸಂಗೀತದ ವಿಭಾಗದಲ್ಲಿ ಚೀನಿಯವರು ಇದ್ದಲ್ಲಿ, ಖಂಡಿತ ಯಾವ ತೊಂದರೆಯೂ ಇರಲಿಕ್ಕಿಲ್ಲ. ಯಾಕೆಂದರೆ ಹೆಚ್ಚು ಕಡಿಮೆ ಎಲ್ಲವೂ ಅವರ ತಲೆಯೊಳಗೆ ಇರುತ್ತದೆ. ಅಥವಾ ಒಮ್ಮೆ ಅವರ ಡೈರಿ ತಿರುಗಿಸಿಬಿಟ್ಟರೆ ಸಾಕು, ಸಣ್ಣಾತಿ ಸಣ್ಣ ಸಂಗೀತದ ವಿವರಗಳು ಅದರಲ್ಲಿ ದಾಖಲಾಗಿಬಿಟ್ಟಿರುತ್ತದೆ. ಸಂಗೀತ ನಿರ್ವಹಣೆ ಅಂದರೆ ಏನು ಅಂತ ತಿಳಿದುಕೊಳ್ಳಬೇಕೆಂದರೆ ಒಮ್ಮೆ ಅವರ ಡೈರಿಯನ್ನು ನೋಡಬೇಕು.

ಕಾರಂತರಂತೂ ಚೀನಿಯನ್ನು ತಾವು ಹೋದಲ್ಲೆಲ್ಲ ಕರೆದುಕೊಂಡು ಹೋಗುತ್ತಿದ್ದರು. ದೆಹಲಿ, ಭೂಪಲ್, ನೀನಾಸಂ, ರಂಗಾಯಣ ಹೀಗೆ ಎಲ್ಲ ರೆಪರ್ಟರಿಗಳಲ್ಲೂ ಕೆಲಸ ಮಾಡಿದ ಅನುಭವ ಚೀನಿಯವರಿಗಿದೆ. ಒಬ್ಬರೇ ಹಲವಾರು ವಾದ್ಯಗಳನ್ನು ಏಕಕಾಲದಲ್ಲಿ ನುಡಿಸುತ್ತಾ, ಹಾಡುತ್ತಾ, ಮೇಳವನ್ನು ಜಾಗರೂಕರನ್ನಾಗಿಸಿ ಹಾಡಿಸುತ್ತಾ, ಜೊತೆಗೆ ಸಿ.ಡಿಗಳನ್ನು ನಿರ್ವಹಿಸುವ ಅವರ ಚಾಕಚಕ್ಯತೆಯನ್ನು ನೋಡಿಯೇ ಅರ್ಥ ಮಾಡಿಕೊಳ್ಳಬೇಕು. ಸಂಗೀತ ನಿರ್ದೇಶಕನ ಕೆಲಸ ಸಂಗೀತ ಸಂಯೋಜನೆ ಮಾಡುವುದಷ್ಟಕ್ಕೆ ಉಳಿಯುವುದಿಲ್ಲ. ಅದು ಪ್ರದರ್ಶನದ ವೇಳೆ ಹೇಗೆ ನಿರ್ವಹಣೆಯಾಗಬೇಕು ಎಂಬುದರ ಕಡೆಗೂ ಮುಂದುವರಿಯುತ್ತದೆ. ಕೆಲವು ಬಾರಿ ಸಂಗೀತ ನಿರ್ದೇಶಕರು ಯಾವಾಗಲೂ ಎಲ್ಲ ಪ್ರದರ್ಶನಗಳಿಗೂ ಹಾಜರಾಗುವುದಕ್ಕೆ ಸಾಧ್ಯವಿಲ್ಲ. ಅಂಥ ಸಂದರ್ಭದಲ್ಲಿ ಅದನ್ನು ನಿರ್ವಹಣೆ ಮಾಡುವವರೇ ಮುಖ್ಯರಾಗಿಬಿಡ್ತಾರೆ. ಈ ರೀತ ಬಿ.ವಿ.ಕಾರಂತರಂಥ ದೊಡ್ಡ ಸಂಗೀತ ನಿರ್ದೇಶಕರಿಗೆ ಯಾವಾಗಲೂ ಜೊತೆಯ ಲ್ಲಿ ನಿಂತವರು ಚೀನಿ. ಅಲ್ಲದೆ ಇದೇ ರೀತಿ ಕಾರಂತರಿಗೆ ನೀನಾಸಂನ ಚಂಡೆ ನಾಗರಾಜ್, ಚಂದ್ರಶೇಖರ ಆಚಾರ್, ಗಜಾನನ.ಟಿ.ನಾಯ್ಕ, ಉಜ್ಜಯಿನಿಯ ಭೂಷಣ್ ಭಟ್, ಭೂಪಾಲಿನ ಅಮೋಲ್, ರೂಬಿ ಎಲ್ಲರೂ ನಿಂತಿದ್ದರು.

ಇವತ್ತಿನ ರಂಗಭೂಮಿಯ ಅತ್ಯಂತ ಅಗತ್ಯದ ರಂಗಸಂಗೀತ ನಿರ್ದೇಶಕರಾಗಿರುವ ಗಜಾನನ ನಾಯ್ಕ ಅವರು ಯಾವಾಗಲೂ ಹೇಳುತ್ತಿರುತ್ತಾರೆ, ಸಂಗಿತ ಸಾಂಗತ್ಯ ನೀಡುವುದು ಅಂದರೆ ಏನು ಅನ್ನೋದನ್ನು ಈಗಿನವರು ಚೀನಿ ಸರ್ ಅವರನ್ನು ನೋಡಿ ಕಲೀಬೇಕು. ಅವರಂತೆ ನಾಟಕದ ಮೇಳವನ್ನು ನಿರ್ವಹಣೆ ಮಾಡೋರನ್ನು ನಾನು ನೋಡಲೇ ಇಲ್ಲ ಅಂತಾರೆ . ಅವರು ಕೂಡ ಚೀನಿ ಸರ್ ಅವರಿಂದ ಕಲಿತವರೇ. ಗಜಾನನ ಪ್ರತೀ ಹೊಸ ಪ್ರಯೋಗವನ್ನು ಕಟ್ಟುವಾಗಲೂ ಚೀನಿಯವರನ್ನು ನೆನೆಸುತ್ತಾರೆ.

ಈಗಂತೂ ಕಾರಂತರ ನಂತರ ರಂಗಾಯಣದಲ್ಲಿ ಹೆಚ್ಚು ಕಡಿಮೆ ಎಲ್ಲ ನಾಟಕಗಳಿಗೂ ಚೀನಿಯವರೇ ಸಂಗೀತ ನಂಯೋಜನೆ ಮತ್ತು ನಿರ್ವಹಣೆ ಮಾಡುತ್ತಿದ್ದಾರೆ. ಚಿಣ್ಣರ ಮೇಳದ ಸಂದರ್ಭದಲ್ಲಂತು ಒಟ್ಟೊಟ್ಟಿಗೆ 8 ರಿಂದ 10 ನಾಟಕಗಳಿಗೆ ಏಕಕಾಲದಲ್ಲಿ ಕೆಲಸ ಮಾಡುತ್ತಾರೆ.ಮೊನ್ನೆ ಮಲೆಗಳಲ್ಲಿ ಮದುಮಗಳು ನಾಟಕದಲ್ಲಿ 9 ಗಂಟೆ ನಿರಂತರವಾಗಿ , ನಿಮಿಷ ಕೂಡ ಕದಲದೆ ಇಡೀ ನಾಟಕದುದ್ದಕ್ಕೂ ಬರುವ ಎಲ್ಲ ರೀತಿಯ ಸಂಗೀತವನ್ನು ನಿರ್ವಹಣೆ ಮಾಡಿದ ಚೀನಿ ಅವರನ್ನು ನೋಡಿ ಇಡೀ ತಂಡವೇ ದಂಗಾಗಿಬಿಟ್ಟಿದೆ. ಇಂತಹ ಮ್ಯಾಜಕ್ ಅನ್ನು ಶ್ರೀನಿವಾಸ ಭಟ್ ಯಾವಾಗಲೂ ಮಾಡುತ್ತಿರುತ್ತಾರೆ.

ಶ್ರೀನಿವಾಸ ಭಟ್ ಅಂದರೆ ಹೆಚ್ಚು ಜನಕ್ಕೆ ಗೊತ್ತಾಗೋದೆ ಇಲ್ಲ. ಅವರು ಎಲ್ಲರ ಪ್ರೀತಿಯ ಚೀನೀ...

Advertisements